ಚರ್ಮರೋಗಗಳ ನಿರ್ವಹಣೆಗೆ ಆಯುಷ್ ಸಚಿವಾಲಯದಿಂದ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಸೋರಿಯಾಸಿಸ್, ವಿಟಿಲಿಗೋ, ಡರ್ಮಟೈಟಿಸ್ ಸೇರಿದಂತೆ ವಿವಿಧ ಚರ್ಮರೋಗಗಳ ನಿರ್ವಹಣೆಗೆ ಆಯುರ್ವೇದ, ಸಿದ್ಧ, ಯುನಾನಿ, ಹೋಮಿಯೋಪತಿ ಮತ್ತು ಯೋಗವನ್ನು ಒಳಗೊಂಡ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿಗಳನ್ನು ಆಯುಷ್ ಸಚಿವಾಲಯ ಬಿಡುಗಡೆ ಮಾಡಿದೆ.
ಚರ್ಮರೋಗಗಳ ತಡೆಗಟ್ಟುವಿಕೆ, ರೋಗನಿರ್ಣಯ, ಚಿಕಿತ್ಸೆ, ಅನುಸರಣೆ ಮತ್ತು ಪುನರ್ವಸತಿ ಪ್ರಕ್ರಿಯೆಗಳಲ್ಲಿ ಏಕರೂಪತೆ ಹಾಗೂ ಗುಣಮಟ್ಟವನ್ನು ಖಚಿತಪಡಿಸುವುದು ಈ ಮಾರ್ಗಸೂಚಿಗಳ ಉದ್ದೇಶವಾಗಿದೆ. ಪುರಾವೆ ಆಧಾರಿತ ವೈದ್ಯಕೀಯ ಅಭ್ಯಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇವುಗಳನ್ನು ರೂಪಿಸಲಾಗಿದೆ.
11ನೇ ಆಯುರ್ವೇದ ದಿನದ ಸಂದರ್ಭದಲ್ಲಿ ಬಿಡುಗಡೆಯಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ (ಡಿಜಿಎಚ್ಎಸ್) ಆಯುಷ್ ವಿಭಾಗ ಸಿದ್ಧಪಡಿಸಿದೆ.
ಆಯುಷ್ ಖಾತೆಯ ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಪ್ರತಾಪ್ರಾವ್ ಜಾಧವ್ ಮಾತನಾಡಿ, ಪ್ರಮಾಣಿತ ಮತ್ತು ಪುರಾವೆ ಆಧಾರಿತ ರೋಗಿಗಳ ಆರೈಕೆಗೆ ಉತ್ತೇಜನ ನೀಡುವ ಮೂಲಕ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿಗಳ ಏಕೀಕರಣವನ್ನು ಈ ಮಾರ್ಗಸೂಚಿಗಳು ಬಲಪಡಿಸಲಿವೆ ಎಂದು ಹೇಳಿದರು.
ಸೋರಿಯಾಸಿಸ್, ಡರ್ಮಟೈಟಿಸ್, ವಿಟಿಲಿಗೋ, ಉರ್ಟಿಕೇರಿಯಾ ಮತ್ತು ಡರ್ಮಟೊಫೈಟೋಸಿಸ್ ಸೇರಿದಂತೆ ಸಾಮಾನ್ಯ ಚರ್ಮದ ಕಾಯಿಲೆಗಳನ್ನು ಮಾರ್ಗಸೂಚಿಗಳು ಒಳಗೊಂಡಿವೆ. ಚಿಕಿತ್ಸಾ ಕ್ರಮಗಳ ಜೊತೆಗೆ ರೋಗಿಗಳ ನಿರಂತರ ಮೇಲ್ವಿಚಾರಣೆ ಮತ್ತು ಪುನರ್ವಸತಿಗೂ ಆದ್ಯತೆ ನೀಡಲಾಗಿದೆ.

ಆಯುಷ್ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ ಅವರು, ಮಾರ್ಗಸೂಚಿಗಳು ಚಿಕಿತ್ಸೆಯಲ್ಲಿ ಸ್ಥಿರತೆ ಮತ್ತು ವಿವೇಚನಾಯುಕ್ತ ನಿರ್ಧಾರ ಕೈಗೊಳ್ಳುವಿಕೆಗೆ ನೆರವಾಗಲಿದ್ದು, ಪ್ರತಿಯೊಂದು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯ ಮೂಲ ತತ್ವಗಳನ್ನು ಸಂರಕ್ಷಿಸಲಿವೆ ಎಂದು ತಿಳಿಸಿದರು. ಡಿಜಿಎಚ್ಎಸ್ ಮಹಾನಿರ್ದೇಶಕ ಡಾ. ಲವನೀಶ್ ಜಿ. ಕೃಷ್ಣ ಅವರು, ರೋಗಿ ಕೇಂದ್ರಿತ ಆರೋಗ್ಯ ಸೇವೆ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಉತ್ತೇಜಿಸುವಲ್ಲಿ ಇವುಗಳ ಪಾತ್ರವನ್ನು ವಿವರಿಸಿದರು.
ಆಯುಷ್ ಸಂಶೋಧನಾ ಮಂಡಳಿಗಳು, ಶೈಕ್ಷಣಿಕ ತಜ್ಞರು, ಯೋಗ ಪರಿಣತರು ಮತ್ತು ಆಧುನಿಕ ವೈದ್ಯಕೀಯ ವೃತ್ತಿಪರರ ಸಮಾಲೋಚನೆಯೊಂದಿಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಶಾಸ್ತ್ರೀಯ ಗ್ರಂಥಗಳ ಅಧ್ಯಯನದ ಜತೆಗೆ ಸಮಕಾಲೀನ ವೈಜ್ಞಾನಿಕ ಪುರಾವೆಗಳನ್ನೂ ಪರಿಶೀಲಿಸಲಾಗಿದೆ.
ದೆಹಲಿಯ ಆಯುಷ್ ನಿರ್ದೇಶನಾಲಯದ ಸಹಯೋಗದಲ್ಲಿ ಚಿಕಿತ್ಸಾ ಪ್ರೋಟೋಕಾಲ್ಗಳನ್ನು ಕ್ಷೇತ್ರಮಟ್ಟದಲ್ಲಿ ಪರೀಕ್ಷಿಸಲಾಗಿದ್ದು, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ಕೇಂದ್ರಗಳ ವೈದ್ಯಕೀಯ ಅಧಿಕಾರಿಗಳ ಅಭಿಪ್ರಾಯಗಳನ್ನು ಅಂತಿಮ ಮಾರ್ಗಸೂಚಿಗಳಲ್ಲಿ ಅಳವಡಿಸಲಾಗಿದೆ.
ಈ ಮಾರ್ಗಸೂಚಿಗಳು ವೈದ್ಯಕೀಯ ನಿರ್ಧಾರ ಕೈಗೊಳ್ಳುವಿಕೆ, ವೃತ್ತಿಪರ ತರಬೇತಿ, ಶಿಕ್ಷಣ ಮತ್ತು ಸಂಶೋಧನೆಗೆ ನೆರವಾಗಲಿದ್ದು, ಆಯುಷ್ ಆರೋಗ್ಯ ಸೇವೆಗಳಲ್ಲಿ ಪ್ರಮಾಣೀಕರಣ ಮತ್ತು ಗುಣಮಟ್ಟದ ಭರವಸೆಯನ್ನು ಬಲಪಡಿಸಲಿವೆ ಎಂದು ಸಚಿವಾಲಯ ನಿರೀಕ್ಷಿಸಿದೆ.
