ಉತ್ತರಾಖಂಡ: ಜಲಜೀವನ್ ಮಿಷನ್ ನೀರು ಕುಡಿಯಲು ಯೋಗ್ಯವೇ? ತಾವೇ ನೀರು ಕುಡಿದು ಪರಿಶೀಲಿಸಿದ ಸಚಿವ ಸೋಮಣ್ಣ

0
Somanna-Drinks-Tap-Water-to-Check-JJM-Scheme-in-Uttarakhand

ಹರಿದ್ವಾರ (ಉತ್ತರಾಖಂಡ): ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ಸುಲ್ತಾನ್‌ಪುರ ಮಜ್ರಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಅನುಷ್ಠಾನಗೊಳಿಸಿರುವ ಕೊಳವೆ ನೀರು ಪೂರೈಕೆ ಯೋಜನೆಯನ್ನು ಪರಿಶೀಲಿಸಿದರು. ಈ ವೇಳೆ ನೀರಿನ ಗುಣಮಟ್ಟದ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಸಚಿವರು ನೀರನ್ನು ಕುಡಿದು ನೋಡಿದರು.

ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು, ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ‘ಪಾನಿ ಸಮಿತಿ’ ಸದಸ್ಯರೊಂದಿಗೆ ಸಂವಾದ ನಡೆಸಿ, ಯೋಜನೆಯ ಅನುಷ್ಠಾನ ಮತ್ತು ಪ್ರಯೋಜನಗಳ ಕುರಿತು ಮಾಹಿತಿ ಪಡೆದರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಗಳನ್ನು ತಿಳಿದುಕೊಳ್ಳಲು ಸಂತೋಷವಾಗಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.

ಹಿಂದೆ ಬೇಸಿಗೆಯ ತಿಂಗಳುಗಳಲ್ಲಿ ತೀವ್ರ ನೀರಿನ ಅಭಾವ ಎದುರಿಸುತ್ತಿದ್ದ ಗ್ರಾಮಸ್ಥರು, ಕಳಪೆ ಗುಣಮಟ್ಟದ ನೀರಿನ ಮೇಲೆ ಅವಲಂಬಿತರಾಗಿದ್ದ ದಿನಗಳನ್ನು ಸಚಿವರೊಂದಿಗೆ ಹಂಚಿಕೊಂಡರು. ಜಲಜೀವನ್ ಮಿಷನ್ ಅಡಿಯಲ್ಲಿ ಕೊಳವೆ ನೀರು ಪೂರೈಕೆ ಯೋಜನೆ ಕಾರ್ಯಾರಂಭ ಮಾಡಿದ ಬಳಿಕ ಸುಮಾರು 150 ವಸತಿಗಳನ್ನು ಒಳಗೊಂಡ ಗ್ರಾಮಕ್ಕೆ ನಿಯಮಿತವಾಗಿ, ಸುರಕ್ಷಿತವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಸುರಕ್ಷಿತ ಕುಡಿಯುವ ನೀರು ಒದಗಿಸುವ ಗುರಿಯನ್ನು ಹೊಂದಿರುವ ಜಲಜೀವನ್ ಮಿಷನ್‌ನ ಪ್ರಗತಿಯನ್ನು ಪರಿಶೀಲಿಸುವುದು ಈ ಭೇಟಿಯ ಉದ್ದೇಶವಾಗಿತ್ತು.

Leave a Reply

Your email address will not be published. Required fields are marked *