ಸೇತುವೆಯಿಂದ ನದಿಗೆ ಉರುಳಿದ ಎಸ್ಯುವಿ: ಆರು ಮಂದಿ ಸಾವು

ಅರಾರಿಯಾ: ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಎಸ್ಯುವಿ ಕಾರೊಂದು ಸೇತುವೆಯಿಂದ ನದಿಗೆ ಉರುಳಿ ಆರು ಮಂದಿ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಬುಧವಾರ ತಡರಾತ್ರಿ ತರಾಬಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿ ಸೇತುವೆಯಲ್ಲಿ ಅಪಘಾತ ಸಂಭವಿಸಿದೆ.
ತಿಲಕ ಸಮಾರಂಭದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಎಸ್ಯುವಿ, ಸೇತುವೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಿಯಾ ನದಿಗೆ ಬಿದ್ದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಸ್ಥಳೀಯರು ವಾಹನದಲ್ಲಿದ್ದ ಯುವಕನೊಬ್ಬನನ್ನು ರಕ್ಷಿಸಿದ್ದಾರೆ.

ಮೃತರೆಲ್ಲರೂ ಸುಪೌಲ್ ಜಿಲ್ಲೆಯ ಪಿಪ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ತುಮಾಹಾ ಗ್ರಾಮದ ನಿವಾಸಿಗಳಾಗಿದ್ದು, 15ರಿಂದ 28 ವರ್ಷ ವಯಸ್ಸಿನವರಾಗಿದ್ದಾರೆ. ಅವರು ಅರಾರಿಯಾದ ಸಿಕ್ಟಿ ಪ್ರದೇಶದ ಭಪ್ತಿಯಾಹಿ ಗ್ರಾಮದಲ್ಲಿ ನಡೆದ ತಿಲಕ ಸಮಾರಂಭದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದರು.
ಆರು ಮೃತದೇಹಗಳನ್ನು ಅರಾರಿಯಾ ಸದರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದೆ. ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಅಪಘಾತದ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
