300ಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ಡ್ರಮ್ಸ್‌ ನುಡಿಸಿದ್ದ ಕಲಾವಿದ ಕನ್ನಡದ ‘ಶಿವಮಣಿ’ ಡ್ರಮ್ಮರ್ ದೇವ ನಿಧನ

0
Musician-Drummer-Deva

ಬೆಂಗಳೂರು: ‘ಕನ್ನಡದ ಶಿವಮಣಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಡ್ರಮ್ಮರ್ ದೇವ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.

ಕಳೆದ ಮೂರೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೇವ ಅವರು ಇತ್ತೀಚೆಗೆ ಗ್ಯಾಂಗ್ರಿನ್ ಸಮಸ್ಯೆಯಿಂದ ಒಂದು ಕಾಲನ್ನು ಕಳೆದುಕೊಂಡಿದ್ದರು. ಆದರೂ ಧೃತಿಗೆಡದೆ ಕೃತಕ ಕಾಲಿನ ನೆರವಿನಿಂದ ಡ್ರಮ್ಸ್‌ ನುಡಿಸುವುದನ್ನು ಮುಂದುವರಿಸಿದ್ದರು.

ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇತ್ತೀಚೆಗೆ ಮನೆಗೆ ಮರಳಿದ್ದರು. ಆದರೆ, ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ನಟರ 300ಕ್ಕೂ ಹೆಚ್ಚು ಚಿತ್ರಗೀತೆಗಳಿಗೆ ದೇವ ಅವರು ಡ್ರಮ್ಸ್‌ ನುಡಿಸಿದ್ದರು.

ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ಅವರು, ‘5 ಈಡಿಯಟ್ಸ್’ ಹಾಗೂ ‘ಪ್ರೀತಿ ನೀ ಹಿಂಗ್ಯಾಕೆ’ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಉದಯ ಟಿವಿಯ ‘ಅಕ್ಷರಮಾಲೆ’ ಕಾರ್ಯಕ್ರಮದಲ್ಲಿ ಡ್ರಮ್ಸ್‌ ನುಡಿಸುವ ಮೂಲಕ ಕಿರುತೆರೆ ಪ್ರೇಕ್ಷಕರಲ್ಲೂ ಅವರು ಜನಪ್ರಿಯರಾಗಿದ್ದರು.

Leave a Reply

Your email address will not be published. Required fields are marked *

You may have missed