ಎನ್‌ಕೌಂಟರ್ ಬಳಿಕ ಕಾಡಿಗೆ ಬೆಂಕಿ: ಬೇಟೆ ತಡೆ ಶಿಬಿರ ಸ್ಫೋಟ

0
fire-incident-1-1-750x435-1-300x174-1

ಚಾಮರಾಜನಗರ: ಹನೂರು ವನ್ಯಜೀವಿ ವಲಯದಲ್ಲಿ ಮೂವರು ಶಂಕಿತ ಕಳ್ಳಬೇಟೆಗಾರರು ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ಧ ದುಷ್ಕರ್ಮಿಗಳ ಕೃತ್ಯಗಳು ಮುಂದುವರಿದಿವೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಸುಮಾರು 10 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಲಾಗಿದ್ದು, ಬೇಟೆ ತಡೆ ಶಿಬಿರವನ್ನೂ ಸ್ಫೋಟಿಸಲಾಗಿದೆ.

ಆಗಸ್ಟ್ 15ರಂದು ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಘಟನೆಗೆ ಪ್ರತೀಕಾರವಾಗಿ ಈ ಕೃತ್ಯಗಳನ್ನು ಎಸಗಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಶಿಲುವೆಪುರ ಅರಣ್ಯ ವ್ಯಾಪ್ತಿಗೆ ನುಗ್ಗಿದ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದು, ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಜಾಗೇರಿ ಸಮೀಪದ ಕಳ್ಳಬೇಟೆ ತಡೆ ಶಿಬಿರವನ್ನೂ ಧ್ವಂಸಗೊಳಿಸಲಾಗಿದೆ.

ಇದಕ್ಕೂ ಮುನ್ನ ಕೊತ್ತನೂರು ವಲಯದ ಮಿಂಚಿನರೆಹಳ್ಳದಲ್ಲಿದ್ದ ಕಳ್ಳಬೇಟೆ ತಡೆ ಶಿಬಿರವನ್ನು ಡೈನಮೈಟ್ ಹಾಗೂ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಿಸಲಾಗಿತ್ತು. ಸ್ಫೋಟದ ತೀವ್ರತೆಗೆ ಶಿಬಿರದ ಗೋಡೆಗಳು ಹಾನಿಗೊಂಡಿದ್ದು, ಒಳಗಿದ್ದ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಘಟನೆಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಕಾವೇರಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮಗಳಲ್ಲಿ ಅರಣ್ಯ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ಕೃತ್ಯಗಳು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಆತಂಕ ಮೂಡಿಸಿವೆ.

ಎನ್‌ಕೌಂಟರ್ ಬಳಿಕ ಪ್ರತೀಕಾರದ ದಾಳಿ ನಡೆಯುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *