RCBಗೆ ಗುಜರಾತ್ ಟೈಟಾನ್ಸ್ ಶಾಕ್ – 25 ಎಸೆತ ಬಾಕಿ ಇರುವಾಗಲೇ ಜಿಟಿ ಭರ್ಜರಿ ಗೆಲುವು

0
Gujarat Titans - IPL 2026

ಅಹಮದಾಬಾದ್: ಐಪಿಎಲ್ 2026ರ 42ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸುಲಭ ಜಯ ಸಾಧಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ಕೇವಲ 155 ರನ್‌ಗಳಿಗೆ ಆಲೌಟ್ ಆಗಿದ್ದು, ಈ ಗುರಿಯನ್ನು ಗುಜರಾತ್ 25 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಜಾಕೋಬ್ ಬೆಥೆಲ್ 5 ರನ್‌ಗೆ ಔಟಾದರೆ, ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟವಾಡಿ ರಬಾಡ ಓವರ್‌ನಲ್ಲಿ ಸತತ ಬೌಂಡರಿಗಳನ್ನು ಬಾರಿಸಿದರೂ ಮುಂದಿನ ಓವರ್‌ನಲ್ಲೇ ಔಟಾದರು. ನಾಯಕ ಪಾಟಿದಾರ್ 19 ರನ್‌ಗೆ ಔಟಾದರೆ, ಜಿತೇಶ್ ಶರ್ಮಾ ಕೇವಲ 1 ರನ್‌ಗೆ ಪೆವಿಲಿಯನ್ ಸೇರಿದರು. ಟಿಮ್ ಡೇವಿಡ್ 9 ರನ್‌ಗೆ ಔಟಾದರು. ತಂಡದ ಪರ ದೇವದತ್ ಪಡಿಕ್ಕಲ್ 40 ರನ್‌ಗಳ ಹೋರಾಟ ನೀಡಿದರೂ, ರಶೀದ್ ಖಾನ್ ಅವರ ಎಸೆತದಲ್ಲಿ ಬೌಲ್ಡ್ ಆಗಿದರು. ಅಂತಿಮವಾಗಿ ಆರ್‌ಸಿಬಿ 19.1 ಓವರ್‌ಗಳಲ್ಲಿ 155 ರನ್‌ಗಳಿಗೆ ಕುಸಿತ ಕಂಡಿತು.

ಈ ಗುರಿ ಬೆನ್ನಟ್ಟಿದ ಗುಜರಾತ್ ಕೂಡ ಆರಂಭದಲ್ಲೇ ಸಾಯಿ ಸುದರ್ಶನ್ ವಿಕೆಟ್ ಕಳೆದುಕೊಂಡಿತು. ಆದರೆ ಶುಭಮನ್ ಗಿಲ್ ಅಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 18 ಎಸೆತಗಳಲ್ಲಿ 43 ರನ್ ಗಳಿಸಿ ತಂಡಕ್ಕೆ ವೇಗ ನೀಡಿದರು. ಜೋಸ್ ಬಟ್ಲರ್ 39 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ರಾಹುಲ್ ತೆವಾಟಿಯಾ ತಂಡವನ್ನು ಸುಲಭವಾಗಿ ಗೆಲುವಿನತ್ತ ಕೊಂಡೊಯ್ದರು. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಐದನೇ ಜಯ ದಾಖಲಿಸಿದರೆ, ಆರ್‌ಸಿಬಿಗೆ ಇದು ಮೂರನೇ ಸೋಲಾಗಿದೆ.

Leave a Reply

Your email address will not be published. Required fields are marked *