‘ರಣಬಾಲಿ’ಯ ಜಯಮ್ಮ ಪಾತ್ರಕ್ಕೆ ಸಿಗುತ್ತಿರುವ ಪ್ರೀತಿಗೆ ರಶ್ಮಿಕಾ ಭಾವುಕ

0
Rashmika-Mandanna-in-Ranabali-movie

ಬೆಂಗಳೂರು: ‘ರಣಬಾಲಿ’ ಚಿತ್ರದಲ್ಲಿ ಜಯಮ್ಮ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ತಮ್ಮ ಪಾತ್ರ ಹಾಗೂ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿಗೆ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಅವರು, ಜಯಮ್ಮನ ವ್ಯಕ್ತಿತ್ವ, ಚಿತ್ರದ ಕಥಾವಸ್ತು ಮತ್ತು ಚಿತ್ರತಂಡದ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

“ಜಯಮ್ಮ! ಎಷ್ಟು ಪರಿಶುದ್ಧವಾದ ಪ್ರೀತಿಯನ್ನು ಹೊಂದಿರುವ ಮಹಿಳೆ ಈಕೆ! ಒಬ್ಬ ಮಹಿಳೆಯಾಗಿರುವುದರ ಅರ್ಥವೇನು ಎಂಬುದನ್ನು ಅವರು ನನಗೆ ತಿಳಿಸಿಕೊಟ್ಟರು. ತಮ್ಮ ಜನರ ಪರವಾಗಿ ನಿಲ್ಲುವುದು, ಅವರನ್ನು ರಕ್ಷಿಸುವುದು ಮತ್ತು ತಮ್ಮೆಲ್ಲ ಪ್ರೀತಿಯನ್ನು ಅವರಿಗೆ ಅರ್ಪಿಸುವುದೇ ಅವರ ವ್ಯಕ್ತಿತ್ವ,” ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

‘ರಣಬಾಲಿ’ ಚಿತ್ರವು ಒಂದು ಸಮುದಾಯದ ಶಕ್ತಿ, ದೇವರ ಮೇಲಿನ ನಂಬಿಕೆ, ಕಷ್ಟದ ಸಂದರ್ಭಗಳಲ್ಲಿಯೂ ಸಣ್ಣಪುಟ್ಟ ಸಂತೋಷಗಳನ್ನು ಸಂಭ್ರಮಿಸುವ ಗುಣ ಹಾಗೂ ಹೊರಗಿನವರು ತಮ್ಮ ಬದುಕಿನಲ್ಲಿ ಹಸ್ತಕ್ಷೇಪ ಮಾಡಲು ಬಂದಾಗ ಒಗ್ಗಟ್ಟಿನಿಂದ ಎದುರಿಸುವ ಮನೋಭಾವವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

“ನಾವು ಸುಮ್ಮನೆ ನಿಂತು ನೋಡುವುದಿಲ್ಲ; ಹೋರಾಡುತ್ತೇವೆ. ‘ರಣಬಾಲಿ’ಯ ಕಥೆಯ ಸಾರವೇ ಇದೇ. ನಾವೆಲ್ಲರೂ ಒಂದೇ ಉದ್ದೇಶಕ್ಕಾಗಿ ಒಟ್ಟಾಗಿ ಹೋರಾಡುತ್ತೇವೆ,” ಎಂದು ಚಿತ್ರದ ಆಶಯವನ್ನು ವಿವರಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ‘ರಣಬಾಲಿ’ ವೀಕ್ಷಿಸುವುದು ವಿಭಿನ್ನ ಅನುಭವ ನೀಡುತ್ತದೆ ಎಂದಿರುವ ಅವರು, ಉತ್ತಮ ಸಿನಿಮಾವನ್ನು ಸಂಪೂರ್ಣವಾಗಿ ಅನುಭವಿಸುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದ ನಿರ್ದೇಶಕ ರಾಹುಲ್ ಸಂಕೃತ್ಯನ್ ಅವರನ್ನು ದೇಶದ ಅದ್ಭುತ ಕಥೆಗಾರರಲ್ಲಿ ಒಬ್ಬರು ಎಂದು ಬಣ್ಣಿಸಿರುವ ರಶ್ಮಿಕಾ, ಅವರ ಕಥೆ ಹೇಳುವ ಕಲೆ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದ್ದಾರೆ. ನಿರ್ದೇಶಕರ ಪರಿಶ್ರಮಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ದೊರೆಯುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ ಎಂದಿದ್ದಾರೆ.

ಸಹನಟ ವಿಜಯ್ ದೇವರಕೊಂಡ ಅವರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿರುವ ಅವರು, “ನಾನು ನಿಮ್ಮ ಕೆಲಸದ ದೊಡ್ಡ ಅಭಿಮಾನಿ; ಎಂದೆಂದಿಗೂ ಅಭಿಮಾನಿಯಾಗಿರುತ್ತೇನೆ. ಇಂದು ಎಲ್ಲರೂ ನಿಮ್ಮನ್ನು, ನಿಮ್ಮ ಪರಿಶ್ರಮವನ್ನು ಮತ್ತು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಿರುವುದನ್ನು ನೋಡಿ ನನಗೆ ಅಪಾರ ಸಂತೋಷವಾಗುತ್ತಿದೆ,” ಎಂದು ಬರೆದುಕೊಂಡಿದ್ದಾರೆ.

ಚಿತ್ರವನ್ನು ಪೂರ್ಣಗೊಳಿಸಲು ಶ್ರಮಿಸಿದ ಇಡೀ ತಂಡಕ್ಕೆ ಧನ್ಯವಾದ ಅರ್ಪಿಸಿರುವ ರಶ್ಮಿಕಾ, ಈಗಾಗಲೇ ಚಿತ್ರ ವೀಕ್ಷಿಸಿದ ಪ್ರೇಕ್ಷಕರಿಗೆ ಆತ್ಮೀಯ ಕೃತಜ್ಞತೆ ಸಲ್ಲಿಸಿದ್ದಾರೆ. ‘ರಣಬಾಲಿ’ ಚಿತ್ರಮಂದಿರದಿಂದ ಹೊರಬಂದ ಬಳಿಕವೂ ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *