‘ರಾಮಾಯಣ’ದ ಮೊದಲ ಹಾಡು ‘ಜೈ ಜೈ ರಾಮ್’ ಬಿಡುಗಡೆ

ಮುಂಬೈ: ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೊದಲ ಹಾಡು ‘ಜೈ ಜೈ ರಾಮ್’ ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಪ್ರಿಯರ ಗಮನ ಸೆಳೆದಿದೆ.
ಖ್ಯಾತ ಗಾಯಕರಾದ ಅರಿಜಿತ್ ಸಿಂಗ್ ಮತ್ತು ಶ್ರೇಯಾ ಘೋಷಾಲ್ ‘ಜೈ ಜೈ ರಾಮ್’ ಹಾಡಿಗೆ ಧ್ವನಿಯಾಗಿದ್ದಾರೆ. ಕುಮಾರ್ ವಿಶ್ವಾಸ್ ಅವರ ಸಾಹಿತ್ಯಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ಹಾಗೂ ಸನ್ನಿ ಡಿಯೋಲ್ ಹನುಮಂತನಾಗಿ ಅಭಿನಯಿಸಿದ್ದಾರೆ.

‘ಜೈ ಜೈ ರಾಮ್’ ಎಂಬ ಎರಡು ಪದಗಳಲ್ಲೇ ಸಂಪೂರ್ಣ ಭಕ್ತಿ ಮತ್ತು ಪ್ರಾರ್ಥನೆಯ ಭಾವ ಅಡಗಿದೆ. ರಾಮನ ಮಹಿಮೆ ಹಾಗೂ ಭಕ್ತಿಯ ಭಾವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಹಾಡು ಮೂಡಿಬಂದಿದೆ.
ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರವಾಗಿರುವ ‘ರಾಮಾಯಣ’ದ ಮೊದಲ ಭಾಗ ನವೆಂಬರ್ 6ರಂದು ತೆರೆಗೆ ಬರಲು ಸಜ್ಜಾಗಿದೆ.
