ಮೆಟ್ರೋ ಬಗ್ಗೆ ‘ಅರ್ಧ ಸತ್ಯ’ ಹರಡುವುದನ್ನು ನಿಲ್ಲಿಸಿ; BJP ನಾಯಕರಿಗೆ ರಾಮಲಿಂಗಾ ‌ರೆಡ್ಡಿ ತರಾಟೆ

0
Ramalinga Reddy

ಬೆಂಗಳೂರು: BJPಯ ವಿಧಾನಸಭಾ ಮತ್ತು ಲೋಕಸಭಾ ಸದಸ್ಯರುಗಳಿಗೆ ,ಪ್ರಮುಖ‌ ಮುಖಂಡರುಗಳಿಗೆ ಎಲ್ಲಾ ಸತ್ಯಗಳು ತಿಳಿದಿದ್ದರೂ ಸಹ ಅದನ್ನು ಲೆಕ್ಕಿಸದೇ, ಸ್ವಲ್ಪವೂ ನಾಚಿಕೆಯಿಲ್ಲದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಮ್ಮಮೆಟ್ರೋ ಶ್ರೇಯಸ್ಸು ಕೊಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ‌ರೆಡ್ಡಿ ಟೀಕಿಸಿದ್ದಾರೆ.

2006 ರಲ್ಲಿ ಶ್ರೀ ಮನಮೋಹನ್ ಸಿಂಗ್ ರವರು ಮಾನ್ಯ ಪ್ರಧಾನ ಮಂತ್ರಿಗಳಾಗಿದ್ದಾಗ, ರಾಜ್ಯದಲ್ಲಿ ಶ್ರೀ ಧರ್ಮಸಿಂಗ್ ಮಾನ್ಯ ಮುಖ್ಯಮಂತ್ರಿಗಳಾಗಿದ್ದಾಗ , ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ ಎಂ.ಜಿ‌‌ ರಸ್ತೆಯಲ್ಲಿ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದು ಗಮನಸೆಳೆದಿರುವ ರಾಮಲಿಂಗಾ ‌ರೆಡ್ಡಿ, ‘ನಮ್ಮ ಮೆಟ್ರೋ’ ಜನರದ್ದು – ಯಾವ ಪಕ್ಷದ ಸ್ವತ್ತು ಅಲ್ಲ! ಎಂಬುದು ನಮ್ಮ ಭಾವನೆಯಾಗಿತ್ತು. ಆದರೆ ಬಿ.ಜೆ.ಪಿ‌ ಅವರಿಗೆ ಜನಾಸಕ್ತಿಗಿಂತ, ಪ್ರಚಾರಸಕ್ತಿ ಹೆಚ್ಚು ಎಂಬುದು ಗೊತ್ತಾಗುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಕರ್ನಾಟಕ ಸರ್ಕಾರ ಸರಳ ಪಾಲುದಾರ ಅಲ್ಲ — ಅನೇಕ ಸಂದರ್ಭಗಳಲ್ಲಿ ಅದು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತದೆ, ವಿಶೇಷವಾಗಿ ಜಮೀನು ಖರೀದಿ, ವೆಚ್ಚ ಮಿತಿಗೆ ಮೇಲ್ಪಟ್ಟ ಭಾಗಗಳು ಮತ್ತು ಪ್ರಮುಖ ಯೋಜನಾ ಅಂಶಗಳಿಗಾಗಿ ಕರ್ನಾಟಕ ಸರ್ಕಾರವು ಖರ್ಚು ಮಾಡುತ್ತಿದೆ ಎಂಡಿರುವ ಅವರು, ಅರ್ಧ ಸತ್ಯಗಳನ್ನು ಹರಡುವುದನ್ನು ನಿಲ್ಲಿಸಿ, ಕರ್ನಾಟಕ ಸರ್ಕಾರಕ್ಕೆ ಅದರ ನಿಜವಾದ ಗೌರವ ನೀಡಿ ಎಂದಿದ್ದಾರೆ.

ಇದೇ ವೇಳೆ, ಮೆಟ್ರೋ ರೈಲು ಯೋಜನೆ ಸಾಗಿ ಬಂದ ಬಗ್ಗೆ ರಾಮಲಿಂಗಾ ‌ರೆಡ್ಡಿ ಹಂಚಿಕೊಂಡಿರುವ ಮಾಹಿತಿ ಗಮನಸೆಳೆದಿದೆ:

ಫೇಸ್ 1: ಕರ್ನಾಟಕ ಸರ್ಕಾರ – 30% (ಜಮೀನೂ ಸೇರಿ), ಕೇಂದ್ರ – 25%, ಉಳಿದ 45% ಸಾಲದ ರೂಪದಲ್ಲಿ.

ಫೇಸ್ 2: ಕರ್ನಾಟಕ – 30% + ಜಮೀನು ಮತ್ತು ಮಿತಿಮೀರಿದ ವೆಚ್ಚದ ಬಹುತೇಕ ಭಾಗ, ಕೇಂದ್ರ – 20%, ಉಳಿದ 50% ಸಾಲ.

ಫೇಸ್ 3: ಕರ್ನಾಟಕ – 20% + ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ – 20%, ಉಳಿದ 60% ಸಾಲ.

ಪ್ರತಿ ಹಂತದಲ್ಲೂ ಕರ್ನಾಟಕ ಸರ್ಕಾರ ಜಮೀನಿಗಾಗಿ ದೊಡ್ಡ ಮೊತ್ತ ಹಾಕುತ್ತದೆ, ಮತ್ತು ಯೋಜನೆಗಳನ್ನು ಮುನ್ನಡೆಸಲು ನಿರಂತರವಾಗಿ ಹಣ ನೀಡುತ್ತದೆ, ಅನೇಕ ಬಾರಿ ಕೇಂದ್ರದಷ್ಟು ಅಥವಾ ಅದಕ್ಕಿಂತ ಹೆಚ್ಚು ಎಂದಿರುವ ಸಚಿವ ರಾಮಲಿಂಗಾ ‌ರೆಡ್ಡಿ, ನಿಜ ಹೇಳುವುದಾದರೆ, ಎಷ್ಟು ಕಾಲ ಬಿ.ಜೆಪಿ‌‌ ನಾಯಕರು ತಮ್ಮದೇ ರಾಜ್ಯವನ್ನು ಇಂಥ ನಿರ್ಲಕ್ಷ್ಯದಿಂದ ಅವಮಾನಿಸುತ್ತಾ, ನಮ್ಮ ಮೆಟ್ರೋ ಕೇಂದ್ರದ ಉಡುಗೊರೆ ಎಂದು ನಟಿಸುತ್ತಾರೆ? ನಂಬಿಸುತ್ತಾರೆ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *