ಕಣಿವೆ ರಾಜ್ಯದಲ್ಲಿ ರಾಹುಲ್ ಕಮಾಲ್; ಯೋಧರ ಜೊತೆ ಲೇಹ್ ಮಾರುಕಟ್ಟೆಗೆ ಭೇಟಿ

ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೇನಾ ಯೋಧರೊಂದಿಗೆ ಲೇಹ್ ಮಾರುಕಟ್ಟೆಗೆ ಭೇಟಿ ನೀಡಿ ಗಮನಸೆಳೆದರು. ಸೋಮವಾರ ರಾತ್ರಿ ಲೇಹ್ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದ ವೀಡಿಯೊವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ರಾಹುಲ್ ಗಾಂಧೀ ಅವರ ಲೇಹ್ ಮಾರುಕಟ್ಟೆಗೆ ಭೇಟಿ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ‘ಭಾರತ ಮಾತೆ’ ಪ್ರತಿಯೊಬ್ಬ ಭಾರತೀಯನ ಧ್ವನಿ ಎಂದು ಹೇಳಿದ್ದರು. ಇದೇ ರೀತಿಯದ್ದು ಲೇಹ್‌ನಲ್ಲಿ ಪ್ರತಿಧ್ವನಿಸುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಅವರು ತಮ್ಮ ಎಂಟು ದಿನಗಳ ಲಡಾಖ್ ಪ್ರವಾಸವನ್ನು ಶುಕ್ರವಾರ ಮುಕ್ತಾಯಗೊಳಿಸಲಿದ್ದಾರೆ. ಅವರು ಭಾನುವಾರ ಪ್ಯಾಂಗೊಂಗ್ ಸರೋವರಕ್ಕೆ ಭೇಟಿ ನೀಡಿದ್ದರು, ಈ ಸಂದರ್ಭದಲ್ಲಿ ಅವರು ತಮ್ಮ ತಂದೆ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 79 ನೇ ಜನ್ಮದಿನ ಅಂಗವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದರು. ಅವರು ಲೇಹ್‌ನಲ್ಲಿ ಸ್ಥಳೀಯ ಫುಟ್‌ಬಾಲ್ ಪಂದ್ಯವೊಂದರಲ್ಲಿ ಭಾಗವಹಿಸಿದ್ದರು. ಯುವಕರೊಂದಿಗೆ ಸಂವಾದ ನಡೆಸಿದರು. ತಮ್ಮ ಕೆಟಿಎಂ ಡ್ಯೂಕ್ 390 ಬೈಕ್‌ನಲ್ಲಿ ಈ ಪ್ರದೇಶವನ್ನು ಸುತ್ತಾಡಿ ಗಮನಸೆಳೆದಿದ್ದರು.