ಕಲಿಯುಗದ ಪುಣ್ಯಕೋಟಿಯ ಕತೆಯಿದು..?!

ಧರಣಿ ಮಂಡಲ ಮದ್ಯದೊಳಗೆ ಎಂಬ ಜನಪದ ಗೀತೆ ನೀತಿ ಕತೆಯೂ ಹೌದು. ಸತ್ಯದೆದುರು ಕೌರ್ಯ ತಲೆಬಾಗುತ್ತದೆ ಎಂಬುದಕ್ಕೆ ಅದು ಜ್ವಲಂತ ಉದಾಹರಣೆ. ಪುಣ್ಯಕೋಟಿಯ ಕತೆ ಕೇವಲ ಜನಪದ ಕತೆ ಎನಿಸಿರಬಹುದು.
ಪುಣ್ಯಕೋಟಿಯ ರೂಪದ ಹಸುವನ್ನು ಕೊಂದು ತಾನೇನು ಪುಣ್ಯಮಾಡಲಿ ಎಂದು ಅಂದು ಕೊಂಡ ವ್ಯಾಘ್ರ ತನ್ನ ಕ್ರೌರ್ಯವನ್ನು ಬಿಟ್ಟು ಪ್ರಾಣತ್ಯಾಗ ಮಾಡಿದ ಆ ಕತೆಯೇ ಬೇರೆ.
ಇದೀಗ ರಷ್ಯಾದಲ್ಲೊಂದು ವ್ಯಾಘ್ರ ಪುಣ್ಯಕೋಟಿಯ ಕತೆಯನ್ನು ನೆನಪಿಸಿದೆ. ಕಲಿಯುಗದಲ್ಲಿನ ಆ ವ್ಯಾಘ್ರ ಸಾಧುಪ್ರಾಣಿ ಮೇಕೆಯನ್ನು ತಿನ್ನುವ ಬದಲು ಅದನ್ನೇ ತನ್ನ ಬಾಳಗೆಳತಿಯನ್ನಾಗಿ ಸ್ವೀಕರಿಸಿದ ವಿಶೇಷ ಪ್ರಸಂಗ ಅಚ್ಚರಿಗೆ ಕಾರಣವಾಗಿದೆ.
ರಷ್ಯಾದ ಈಸ್ಟರ್ನ್ ಸಫಾರಿ ಪಾರ್ಕ್ ಇಂತಹದ್ದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ. ಅಲ್ಲಿಗೆ ಭೇಟಿ ನೀಡುವವರಿಗೆ
ಅಮೂರ್ ಹೆಸರಿನ ವ್ಯಾಘ್ರ ಆಕರ್ಷಣೆಯ ಕೇಂದ್ರಬಿಂದು. ಈ ಹುಲಿಗೆ ಪ್ರತಿದಿನ ಜೀವಂತ ಪ್ರಾಣಿಯನ್ನು ಕೊಡಲಾಗುತ್ತದೆ. ಭೇಟಿಯಾಡುವಾಗ ಸಿಗುವ ಖುಷಿಯಿಂದ ಸಂತುಷ್ಟನಾಗಿ ಈ ವ್ಯಾಘ್ರ, ಮಾಂಸವನ್ನು ತಿಂದು ತೇಗುತ್ತಾನೆ.
ಅದರಂತೆ ಕಳೆದ ತಿಂಗಳು ಈ ವ್ಯಾಘ್ರನಿದ್ದ ಬೋನಿನ ಬಳಿಗೆ ಒಂದು ಮೇಕೆಯನ್ನು ಬಿಡಲಾಯಿತು. ಆದರೆ ಈ ವ್ಯಾಘ್ರ ಆ ಮೇಕೆಯನ್ನು ಭೇಟೆಯಾಡಿ ತಿನ್ನುವ ಬದಲು ಅದರತ್ತ ಆಕರ್ಷಿತನಾಗಿದ್ದಾನೆ. ದಿನಕಳೆದರೂ ಅದರ ಜೊತೆಗೆ ಓಡಾಡುತ್ತಿದ್ದಾನೆ. ಪಾರ್ಕ್ ಗೆ ಭೇಟಿ ನೀಡಿದವರಿಗೆ ಈ ಪ್ರಾಣಿಗಳ ಸ್ನೇಹ, ಸರಸ ಸಲ್ಲಾಪ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಹುಲಿ ಎಲ್ಲಿಹೋದರು ಈ ಮೇಕೆ ಹಿಂಬಾಲಿಸುತ್ತದೆ. ಒಂದು ವೇಳೆ ಮೇಕೆ ಕಾಣಿಸಿಕೊಳ್ಳದಿದ್ದರೆ ಅಮೂರ್ ಪರಿತಪಿಸುವ ವೈಖರಿಯಂತೂ ವಿರಹವೇದನೆಗೆ ಸಾಕ್ಷಿಯಾಗುತ್ತದೆ. ಇದನ್ನು ಕಂಡು ಹಲವರು ಕಲಿಯುಗದ ಪುಣ್ಯಕೋಟಿಯ ಕತೆಎಂದು ಹೇಳಿಕೊಂಡಿದ್ದೂ ಉಂಟು.
