ಜಲಜೀವನ್ ಮಿಷನ್ ಗೋಲ್ ಮಾಲ್: ಕಳಪೆ ಕಾಮಗಾರಿ, ನೀರು ಪೂರೈಕೆ ಲೋಪಗಳ ಬಗ್ಗೆ ಸಿಬಿಐ ತನಿಖೆಗೆ ಡಾ.ರವಿ ಸಿ.ಟಿ. ಅಗ್ರಹ

ಚಿಕ್ಕಮಗಳೂರು: ರಾಜ್ಯದಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಗಂಭೀರ ಲೋಪದೋಷಗಳು ಹಾಗೂ ಕಳಪೆ ಕಾಮಗಾರಿಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿಬರುತ್ತಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಸೆ.12ರಂದು ಬರೆದಿರುವ ಪತ್ರದಲ್ಲಿ ಯೋಜನೆಯ ಅನುಷ್ಠಾನದಲ್ಲಿನ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿರುವ ಅವರು, ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿರುವ ಯೋಜನೆಯ ಪ್ರಯೋಜನ ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 1,01,30,702 ಗ್ರಾಮೀಣ ಕುಟುಂಬಗಳಿದ್ದು, ಯೋಜನೆ ಆರಂಭಕ್ಕೂ ಮುನ್ನ 24,28,517 ಮನೆಗಳಿಗೆ ನಳ ಸಂಪರ್ಕವಿತ್ತು. ಯೋಜನೆಯಡಿ ಇದುವರೆಗೆ 63,74,100 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಒಟ್ಟು 88,02,617 ಗ್ರಾಮೀಣ ಮನೆಗಳಿಗೆ ನಳ ಸಂಪರ್ಕ ಒದಗಿಸಲಾಗಿದೆ. ಇದಕ್ಕಾಗಿ ಸುಮಾರು ₹37,901.37 ಕೋಟಿ ವೆಚ್ಚವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಗುತ್ತಿಗೆದಾರರ ಸಾಮರ್ಥ್ಯ ಪರಿಶೀಲನೆಗೆ ಒತ್ತಾಯ
ಸಾಮರ್ಥ್ಯವಿಲ್ಲದ ಗುತ್ತಿಗೆದಾರರಿಗೆ ಕಾಮಗಾರಿ ನೀಡಬಾರದು. ಟೆಂಡರ್ ನೀಡುವ ಮುನ್ನ ಗುತ್ತಿಗೆದಾರರ ತಾಂತ್ರಿಕ ಹಾಗೂ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಸಮಗ್ರವಾಗಿ ಪರಿಶೀಲಿಸಬೇಕು ಎಂದು ರವಿ ಆಗ್ರಹಿಸಿದ್ದಾರೆ. ಒಬ್ಬನೇ ಗುತ್ತಿಗೆದಾರರಿಗೆ ಮಿತಿಗಿಂತ ಹೆಚ್ಚಿನ ಕಾಮಗಾರಿಗಳನ್ನು ವಹಿಸುವುದರಿಂದ ಗುಣಮಟ್ಟ ಹಾಗೂ ಕಾಮಗಾರಿ ವೇಗದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇದಕ್ಕೂ ಕಡಿವಾಣ ಹಾಕಬೇಕು ಎಂದಿದ್ದಾರೆ.

ನೀರಿನ ಮೂಲ ಖಚಿತಪಡಿಸಿಕೊಳ್ಳದೆ ಪೈಪ್ಲೈನ್, ಟ್ಯಾಂಕ್ ಸೇರಿದಂತೆ ಕಾಮಗಾರಿ ಆರಂಭಿಸುವುದರಿಂದ ಸಾರ್ವಜನಿಕ ಹಣ ವ್ಯರ್ಥವಾಗುವ ಸಾಧ್ಯತೆ ಇದೆ. ಆದ್ದರಿಂದ ಮೊದಲು ನೀರಿನ ಮೂಲವನ್ನು ಖಚಿತಪಡಿಸಿಕೊಂಡು ನಂತರ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಹೊಸದಾಗಿ ನಿರ್ಮಿಸಿರುವ ಓವರ್ಹೆಡ್ ಟ್ಯಾಂಕ್ಗಳಲ್ಲಿ ಸೋರಿಕೆ, ಎತ್ತರದ ಪ್ರದೇಶಗಳ ಮನೆಗಳಿಗೆ ಸಮರ್ಪಕವಾಗಿ ನೀರು ತಲುಪದಿರುವುದು ಸೇರಿದಂತೆ ಹಲವು ದೂರುಗಳಿವೆ. ಇವುಗಳ ಗುಣಮಟ್ಟ ಹಾಗೂ ನೀರು ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಅರ್ಧಕ್ಕೆ ನಿಂತ ಕಾಮಗಾರಿಗಳಿಗೆ ಕ್ರಮ
ಕೆಲವೆಡೆ ಗುತ್ತಿಗೆದಾರರು ಕಾಮಗಾರಿಗಳನ್ನು ಅರ್ಧಕ್ಕೆ ಬಿಟ್ಟು ತೆರಳಿರುವ ದೂರುಗಳಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರವಿ ಒತ್ತಾಯಿಸಿದ್ದಾರೆ. ಪೈಪ್ಲೈನ್ ಅಳವಡಿಸಲು ಅಗೆದ ರಸ್ತೆಗಳನ್ನು ಕಾಮಗಾರಿ ಬಳಿಕ ಸಮರ್ಪಕವಾಗಿ ಮರುಸ್ಥಾಪಿಸದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ರಸ್ತೆಗಳನ್ನು ಹಿಂದಿನ ಸ್ಥಿತಿಗೆ ಮರುಸ್ಥಾಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದಿದ್ದಾರೆ.
ಜಲಜೀವನ್ ಮಿಷನ್ನಡಿ ಪೂರ್ಣಗೊಂಡಿರುವ ಕಾಮಗಾರಿಗಳ ಗುಣಮಟ್ಟವನ್ನು ಪೈಪ್ಲೈನ್, ಓವರ್ಹೆಡ್ ಟ್ಯಾಂಕ್, ನೀರಿನ ಮೂಲ ಹಾಗೂ ಮನೆಗಳಿಗೆ ನೀರು ಪೂರೈಕೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಪರಿಶೀಲಿಸಬೇಕು. ದಾಖಲೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿರುವುದಕ್ಕಿಂತ ನಿಜವಾಗಿ ಮನೆಗಳಿಗೆ ನೀರು ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಉನ್ನತ ಮಟ್ಟದ ತನಿಖಾ ತಂಡ ರಚನೆಗೆ ಮನವಿ
ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಲು ಉನ್ನತ ಮಟ್ಟದ ತನಿಖಾ ತಂಡ ರಚಿಸಬೇಕು ಎಂದು ರವಿ ಆಗ್ರಹಿಸಿದ್ದಾರೆ. ಕಳಪೆ ಕಾಮಗಾರಿ, ಕಾಮಗಾರಿ ಅಪೂರ್ಣ, ನೀರು ಪೂರೈಕೆ ಲೋಪ ಹಾಗೂ ರಸ್ತೆ ಮರುಸ್ಥಾಪನೆ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಸಾರ್ವಜನಿಕರ ಹಣದಿಂದ ಅನುಷ್ಠಾನಗೊಳ್ಳುತ್ತಿರುವ ಮಹತ್ವದ ಕುಡಿಯುವ ನೀರಿನ ಯೋಜನೆಯ ಸಂಪೂರ್ಣ ಪ್ರಯೋಜನ ಗ್ರಾಮೀಣ ಜನರಿಗೆ ತಲುಪುವಂತೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಇದೇ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿರುವ ಡಾ. ರವಿ ಸಿ.ಟಿ., ಯೋಜನೆಯಲ್ಲಿನ ಲೋಪದೋಷಗಳ ಕುರಿತು ತನಿಖೆ ನಡೆಸಿ, ಪ್ರತಿಯೊಬ್ಬ ಗ್ರಾಮೀಣ ಕುಟುಂಬಕ್ಕೂ ಯೋಜನೆಯ ಪ್ರಯೋಜನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
