ನವಿಲು ಗರಿ ಬಳಸುವ ಮೌಲ್ವಿಗಳ ವಿರುದ್ದವೂ ಕ್ರಮ ಕೈಗೊಳ್ಳಿ; ಬಿಜೆಪಿ ಶಾಸಕರ ಆಗ್ರಹ

ಬೆಂಗಳೂರು: ಹುಲಿ ಉಗುರು ಪ್ರಕರಣದಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾದ ನಂತರ, ಹುಲಿ ಉಗುರು ಹೊಂದಿದ್ದಾರೆಂಬ ಆರೋಪದಲ್ಲಿ ಗಣ್ಯರನೇಕರು ಅರಣ್ಯ ಇಲಾಖೆಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದೇ ವೇಳೆ, ಏಕಾಏಕಿ ವಣ್ಯ ಜೀವಿ ಸಂರಕ್ಷಣಾ ಕಾಯ್ದೆಯ ಪ್ರಯೋಗಕ್ಕಿಳಿದಿರುವ ಅರಣ್ಯಾಧಿಕಾರಿಗಳ ನಡೆಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಲೆನಾಡು, ಕರಾವಳಿ ಭಾಗದ ಅನೇಕ ಮನೆಗಳಲ್ಲಿ ಹುಲಿ ಉಗುರು ಸೇರಿದಂತೆ ವನ್ಯಜೀವಿಗಳ ಉತ್ಪನ್ನಗಳನ್ನು ಇಟ್ಟುಕೊಳ್ಳುವುದು ಬಹಳ ವರ್ಷಗಳಿಂದ ನಡೆಯುತ್ತಿದೆ. ಈ ಕಾರಣಕ್ಕಾಗಿ ಜನರನ್ನು ಏಕಾಏಕಿ ಬಂಧಿಸುವುದು ಸರಿಯಲ್ಲ. ಈ ಕುರಿತು ಸರ್ಕಾರ ಮಧ್ಯಪ್ರವೇಶಿಸುವುದು ಅವಶ್ಯ‌ ಎಂದವರು ಹೇಳಿದ್ದಾರೆ.

ಕೆಲವೊಂದು ದರ್ಗಾಗಳಲ್ಲಿ ನವಿಲು ಗರಿಯನ್ನು ಬಳಸುವ ಪದ್ದತಿ ಇದೆ. ನವಿಲು ಗರಿಯನ್ನು ಇಟ್ಟುಕೊಳ್ಳುವಂತಿಲ್ಲ ಎಂದಾದರೆ ನವಿಲು ಗರಿ ಬಳಕೆ ಮಾಡುವವರನ್ನು ಬಂಧಿಸಲಿ ಎಂದು ಅರಗ ಜ್ಞಾನೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಸರ್ಕಾರದ ವಿರುದ್ದ ಅರವಿಂದ್ ಬೆಲ್ಲದ್ ಆಕ್ರೋಶ: 

ನವಿಲು ಗರಿಗಳನ್ನು ಇಟ್ಕೊಂಡಿರುವ ದರ್ಗಾ, ಮಸೀದಿಗಳ ಮೇಲೆ ದಾಳಿ ಮಾಡಿ ಮುಸ್ಲಿಂ ಮೌಲ್ವಿಗಳ ವಿರುದ್ಧ ಕೇಸ್ ಹಾಕಿ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಕೂಡಾ ಆಕ್ರೋಶ ಹೊರಹಾಕಿದ್ದಾರೆ..

ಅರವಿಂದ್ ಬೆಲ್ಲದ್, ಬಿಜೆಪಿ ಶಾಸಕರು

ಹುಲಿ ಉಗುರು ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಎಲ್ಲ ಮೌಲ್ವಿಗಳಿಗೂ ಏಳೇಳು ವರ್ಷ ಜೈಲು ಶಿಕ್ಷೆ ಕೊಡಿ ಆಗ ನಿಮ್ಮ ಅರಣ್ಯ ರಕ್ಷಣೆ ಕಾಳಜಿ ಎಷ್ಟಿದೆ ಅಂತ ಗೊತ್ತಾಗುತ್ತೆ, ಕೇವಲ ಹಿಂದೂ ನಂಬಿಕೆಗಳನ್ನೇ ಟಾರ್ಗೆಟ್ ಮಾಡಬೇಡಿ ಎಂದರು.

ಸತ್ತ ಪ್ರಾಣಿಗಳ ಚರ್ಮ ಇಟ್ಕೊಳ್ಳೋದು ನಮ್ಮ ಸಾಧು ಸಂತರು.. ಮೊದಲಿನಿಂದಲೂ ಪಾಲಿಸಿಕೊಂಡು ಬಂದ ಪದ್ಧತಿ. ಸಲ್ಮಾನ್ ಖಾನ್ ಥರ ಜಿಂಕೆ ಸಾಯಿಸಿ ಅದರ ಚರ್ಮ ಬಳಸಲ್ಲ. ಕಾನೂನು ಪಾಲಿಸುವುದಾದರೆ ಪರಿಪೂರ್ಣವಾಗಿ ಪಾಲಿಸಿ ಎಂದಿರುವ ಶಾಸಕ ಬೆಲ್ಲದ್, ಕಾನೂನು ಕೇವಲ ಹಿಂದೂ ಸಮಾಜಕ್ಕೆ ಅನ್ವಯಿಸಲ್ಲ, ಮುಸ್ಲಿಮರಿಗೂ ಅನ್ವಯಿಸುತ್ತದೆ ಎಂದರು.