ಪುಲಿಕೇಶಿನಗರ ಸ್ಫೋಟ ಪ್ರಕರಣ: ತನಿಖೆಯ ಅಖಾಡಕ್ಕೆ ಎನ್‌ಐಎ ಎಂಟ್ರಿ?

0
Police-Vehicle-Hoysala-750x422-1

ಬೆಂಗಳೂರು: ನಗರದ ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಅನುಮಾನಾಸ್ಪದ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ಮಾಹಿತಿ ಪಡೆದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಪೊಲೀಸರಿಂದ ತನಿಖೆಯ ವಿವರಗಳನ್ನು ಕೇಳಿದೆ ಎನ್ನಲಾಗಿದೆ. ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಲಾಗಿತ್ತೇ ಅಥವಾ ಬ್ಯಾಟರಿಗಳಿಂದ ಸ್ಫೋಟ ಸಂಭವಿಸಿತೇ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಅ. 20ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಪುಲಿಕೇಶಿನಗರದ ನಿರ್ಮಾಣ ಹಂತದ ಐದು ಅಂತಸ್ತಿನ ಕಟ್ಟಡದಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ SOCO ತಂಡ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟದ ನಿಖರ ಸ್ವರೂಪ ಪತ್ತೆಹಚ್ಚಲು ವಿಧಿವಿಜ್ಞಾನ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಸ್ಫೋಟಕ್ಕೂ ಮುನ್ನ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಪಾರ್ಸೆಲ್ ಇಡುವಂತೆ ಸೂಚಿಸಿದ್ದ ಎನ್ನಲಾಗಿದೆ. ಬಳಿಕ ಸೆಕ್ಯುರಿಟಿ ಗಾರ್ಡ್ ಮತ್ತು ಪೇಂಟರ್ ಪಾರ್ಸೆಲ್ ತೆರೆಯಲು ಮುಂದಾದಾಗ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಾರ್ಸೆಲ್ ಎಲ್ಲಿಂದ ಬಂದಿತ್ತು, ಅದನ್ನು ಕಳುಹಿಸಿದವರು ಯಾರು ಮತ್ತು ಅನಾಮಧೇಯ ಕರೆ ಮಾಡಿದ ವ್ಯಕ್ತಿ ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಥಳ ಪರಿಶೀಲನೆ ಮತ್ತು ವಿಧಿವಿಜ್ಞಾನ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಎಟಿಸಿ ಹಾಗೂ ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, “ನಾವು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಎಲ್ಲ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *