‘ನಾಗೇಂದ್ರ ರಾಜೀನಾಮೆ ಬಿಜೆಪಿಯ ಗೆಲುವಲ್ಲ, ದಲಿತ ನಾಯಕನ ವಿರುದ್ಧದ ಷಡ್ಯಂತ್ರಕ್ಕೆ ಸಿಕ್ಕ ಗೆಲುವು’; ಬಿ.ಕೆ. ಹರಿಪ್ರಸಾದ್

0
Hari-Prasad

ಬೆಂಗಳೂರು: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿರುವುದು ಬಿಜೆಪಿಯ ಗೆಲುವೂ ಅಲ್ಲ, ವಿಪಕ್ಷ ನಾಯಕರ ಹೋರಾಟದ ಫಲವೂ ಅಲ್ಲ. ಇದು ದಲಿತ ಸಮುದಾಯದ ನಾಯಕರ ವಿರುದ್ಧ ನಡೆದ ಷಡ್ಯಂತ್ರ-ಕುತಂತ್ರಕ್ಕೆ ಸಿಕ್ಕ ಗೆಲುವು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಾಗೇಂದ್ರ ಅವರು ಸಾರ್ವಜನಿಕ ಜೀವನದಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಆದರೆ ಬಿಜೆಪಿ ನಾಯಕರು ಇದನ್ನು ‘ಒಂದು ವಿಕೆಟ್ ಬಿದ್ದಿದೆ’ ಎಂದು ಸಂಭ್ರಮಿಸುತ್ತಿರುವುದು ಸರಿಯಲ್ಲ. ರಾಜಕೀಯವೇನೂ ಐಪಿಎಲ್ ಪಂದ್ಯವಲ್ಲ ಎಂದು ಟೀಕಿಸಿದರು.

‘ವಿಕೆಟ್ ಬಿದ್ದಿದೆ’ ಎನ್ನುವವರು ಮೊದಲು ಬಿಜೆಪಿ ತಂಡದಲ್ಲಿ ಎಷ್ಟು ಮಂದಿ ಚಾರ್ಜ್‌ಶೀಟ್ ಎದುರಿಸುತ್ತಿದ್ದಾರೆ, ಜೈಲಿಗೆ ಹೋಗಿದ್ದಾರೆ, ತನಿಖೆ ಎದುರಿಸುತ್ತಿದ್ದಾರೆ ಹಾಗೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬುದನ್ನು ನೋಡಿಕೊಳ್ಳಲಿ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.

ಆರೋಪ ಮಾಡುವುದು ತನಿಖಾ ಸಂಸ್ಥೆಗಳ ಕೆಲಸ, ಅಪರಾಧಿ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸ. ಬಿಜೆಪಿ ಕಚೇರಿ ನ್ಯಾಯಾಲಯವೂ ಅಲ್ಲ, ಬಿಜೆಪಿ ನಾಯಕರು ನ್ಯಾಯಾಧೀಶರೂ ಅಲ್ಲ ಎಂದು ಹೇಳಿದರು.

‘ನಾಗೇಂದ್ರ ವಿರುದ್ಧ ಸಾಕ್ಷ್ಯವಿಲ್ಲ’

ವಾಲ್ಮೀಕಿ ನಿಗಮದ ಅಕ್ರಮ ಬೆಳಕಿಗೆ ಬಂದ ಕೂಡಲೇ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶಿಸಿತ್ತು. ತನಿಖೆಯ ಬಳಿಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬಳಿಕ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸಿದೆ. ನಾಗೇಂದ್ರ ಅವರು ತನಿಖೆಗೆ ಸಹಕರಿಸಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.

ಇಡಿ ಪ್ರಕರಣದಲ್ಲಿ ನಾಗೇಂದ್ರ ಅವರಿಗೆ ಜಾಮೀನು ನೀಡುವ ವೇಳೆ ವಿಶೇಷ ನ್ಯಾಯಾಲಯದ ಆದೇಶವನ್ನು ಬಿಜೆಪಿ ನಾಯಕರು ಗಮನಿಸಬೇಕು. ₹94.73 ಕೋಟಿ ಹಣವನ್ನು ನಾಗೇಂದ್ರ ಸ್ವೀಕರಿಸಿದ್ದಾರೆ ಅಥವಾ ಬಳಸಿದ್ದಾರೆ ಎಂಬುದಕ್ಕೆ ಸಾಕ್ಷ್ಯ ನೀಡಲಾಗಿಲ್ಲ ಎಂದು ನ್ಯಾಯಾಲಯ ದಾಖಲಿಸಿದೆ ಎಂದು ಅವರು ಹೇಳಿದರು. ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲೂ ನಾಗೇಂದ್ರ ಅವರನ್ನು ಆರೋಪಿಯನ್ನಾಗಿ ಮಾಡಿರಲಿಲ್ಲ ಎಂದರು.

ಹಗರಣದ ತನಿಖೆಯನ್ನು ಸಿಬಿಐ ಅಥವಾ ಇಡಿ ನಡೆಸಲಿ, ದಾಖಲೆಗಳಿದ್ದರೆ ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ. ಆದರೆ ಆರೋಪವನ್ನೇ ಶಿಕ್ಷೆಯಂತೆ ಬಿಂಬಿಸುವ ರಾಜಕೀಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹರಿಪ್ರಸಾದ್ ಹೇಳಿದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿದ್ದರೆ ಬಳ್ಳಾರಿಯಿಂದಲೇ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ ಅವರು, 2011ರ ಲೋಕಾಯುಕ್ತ ಅಕ್ರಮ ಗಣಿಗಾರಿಕೆ ವರದಿ ಹಾಗೂ ರೆಡ್ಡಿ ಸಹೋದರರ ಪ್ರಕರಣಗಳನ್ನು ಪ್ರಸ್ತಾಪಿಸಿದರು.

ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಇಂತಹ ಹಿನ್ನೆಲೆಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾಗೇಂದ್ರ ಅವರನ್ನು ‘ಸ್ಮಾಲ್ ಫಿಶ್’ ಎಂದು ಕರೆದಿರುವ ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ ಹರಿಪ್ರಸಾದ್, ‘ಬಿಗ್ ಫಿಶ್’ ಯಾರು ಎಂಬ ದಾಖಲೆಗಳಿದ್ದರೆ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಕೇಂದ್ರ ತನಿಖಾ ಸಂಸ್ಥೆಗಳ ಕ್ರಮ ಎದುರಿಸುತ್ತಿದ್ದ ಹಲವು ವಿರೋಧ ಪಕ್ಷದ ನಾಯಕರು ಬಿಜೆಪಿ ಅಥವಾ ಅದರ ಮೈತ್ರಿಕೂಟಕ್ಕೆ ಸೇರಿದ ಬಳಿಕ ಪ್ರಕರಣಗಳಲ್ಲಿ ರಿಲೀಫ್ ಪಡೆದಿದ್ದಾರೆ ಎಂದು ಆರೋಪಿಸಿದ ಅವರು, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ ಎಂದರು.

‘ನಾಗೇಂದ್ರಗೆ ಪಕ್ಷ ಕೈಬಿಡುವುದಿಲ್ಲ’

ನಾಲ್ಕು ಬಾರಿ ಶಾಸಕರಾಗಿರುವ ಹಾಗೂ ಪರಿಶಿಷ್ಟ ಪಂಗಡದ ಪ್ರಮುಖ ನಾಯಕರಾಗಿರುವ ನಾಗೇಂದ್ರ ಅವರನ್ನು ಕಾಂಗ್ರೆಸ್ ಪಕ್ಷ ಕೈಬಿಡುವುದಿಲ್ಲ. ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಹರಿಪ್ರಸಾದ್ ಭರವಸೆ ನೀಡಿದರು.

ಬರ ಪರಿಸ್ಥಿತಿ ಸೇರಿದಂತೆ ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸಲು ಬಿಜೆಪಿ ಮುಂದಾಗಲಿಲ್ಲ. ಚರ್ಚೆ ನಡೆದರೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪಾಲಿನ ಬಗ್ಗೆ ಪ್ರಶ್ನೆ ಎತ್ತಬೇಕಾಗುತ್ತದೆ ಎಂಬ ಕಾರಣಕ್ಕೆ ನಾಗೇಂದ್ರ ವಿಚಾರವನ್ನು ಮುಂದಿಟ್ಟುಕೊಂಡು ಕಲಾಪಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರು ಯಾರೂ ಸತ್ಯಹರಿಶ್ಚಂದ್ರರಲ್ಲ. ಆರೋಪ ಬಂದ ತಕ್ಷಣ ಬಿಜೆಪಿಯ ಯಾರಾದರೂ ರಾಜೀನಾಮೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *