ನಾಗಮಂಗಲ ಘಟನೆ; ವಿಚಾರಣೆ ನಡೆಸುವ ಮೊದಲೇ ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌? ಬಿಜೆಪಿ ಆಕ್ರೋಶ 

ಬೆಂಗಳೂರು: ನಾಗಮಂಗಲದಲ್ಲಿ ವಿಚಾರಣೆ ನಡೆಸುವ ಮೊದಲೇ ಕಾಂಗ್ರೆಸ್‌ ಸರ್ಕಾರ ತಪ್ಪಿತಸ್ಥರಿಗೆ ಕ್ಲೀನ್‌ ಚಿಟ್‌ ನೀಡುತ್ತಿದೆ. ಮೊದಲು ತನಿಖೆ ನಡೆಸಿ, ನಂತರ ತಪ್ಪಿತಸ್ಥರು ಯಾರೆಂದು ತೀರ್ಮಾನಿಸಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಕೂಗಿದಾಗ ಹಾಗೆ ಆಗಿಯೇ ಇಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದರು. ಬಾಂಬ್‌ ಸ್ಫೋಟವಾದಾಗಲೂ ಅದು ವ್ಯಾಪಾರದ ಜಗಳ ಎಂದು ಹೇಳಿದ್ದರು. ಕುಕ್ಕರ್‌ ಬಾಂಬ್‌ ಸ್ಫೋಟದ ಬಗ್ಗೆಯೂ ಹೀಗೆಯೇ ಹೇಳಿದ್ದರು. ನಾಗಮಂಗಲದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿರುವುದು ಬಗ್ಗೆ ಮೊದಲು ಪರಿಶೀಲಿಸಲಿ. ಆದರೆ ಸಚಿವ ಪ್ರಿಯಾಂಕ್‌ ಖರ್ಗೆಯಂಥವರು ಅದನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತವನ್ನು ಎರಡು ಭಾಗ ಮಾಡಿದ ಕಾಂಗ್ರೆಸ್‌ ಮತ್ತೆ ತಲೆಯತ್ತಿ ಮಂಡ್ಯದಲ್ಲಿ ಕೋಮುಗಲಭೆಗೆ ಕಾರಣವಾಗಿದೆ. ವಿದೇಶಕ್ಕೆ ಹೋದ ರಾಹುಲ್‌ ಗಾಂಧಿ, ಭಾರತದ ವಿರುದ್ಧ ಮಾತಾಡುವುದರ ಜೊತೆಗೆ ಮೀಸಲಾತಿ ತೆಗೆದುಹಾಕುವ ಬಗ್ಗೆ ಹೇಳಿದ್ದಾರೆ. ಕಾಂಗ್ರೆಸ್‌ ಆಡಳಿತ ಬರುವ ಕಡೆಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ಹಬ್ಬದ ವಾತಾವರಣ ಇರುತ್ತದೆ. ಸವಾಲು ಹಾಕುವವರನ್ನು ಜೈಲಿಗೆ ಹಾಕುವ ಬದಲು ಪೊಲೀಸರು ಅವರನ್ನು ಕರೆದು ಕಾಫಿ ಕೊಟ್ಟಿದ್ದಾರೆ. ಇದಕ್ಕಾಗಿಯೇ ಕೋಮು ದಳ್ಳುರಿ ಉಂಟಾಗಿದೆ. ಒಂದೇ ಸಮುದಾಯವನ್ನು ವೈಭವೀಕರಿಸಲಾಗುತ್ತಿದೆ. ಆ ಸಮುದಾಯದವರು ಏನು ಮಾಡಿದರೂ ಕ್ರಮ ಕೈಗೊಳ್ಳುವುದಿಲ್ಲ ಎಂದು ದೂರಿದರು.

ಒಕ್ಕಲಿಗ ಸಮುದಾಯದ ಸರ್ವೋಚ್ಛ ನಾಯಕ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಗೌರವ ಹಾಳು ಮಾಡಲು ಕಾಂಗ್ರೆಸ್‌ ನಾಯಕರು ಯತ್ನಿಸಿದ್ದಾರೆ. ಒಕ್ಕಲಿಗರ ಮೇಲೆ ಅಷ್ಟು ಒಲವಿದ್ದರೆ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಿ ಒಕ್ಕಲಿಗರನ್ನೇ ಮುಖ್ಯಮಂತ್ರಿ ಮಾಡಲಿ. ಡಿ.ಕೆ.ಶಿವಕುಮಾರ್‌ ಪೇಪರ್‌, ಪೆನ್ನು ಹಿಡಿದುಕೊಂಡು ಅಮೆರಿಕಕ್ಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.

You may have missed