ದಕ್ಷಿಣ ಕೊರಿಯಾದೊಂದಿಗೆ ಕರ್ನಾಟಕದ ಕೈಗಾರಿಕಾ, ತಂತ್ರಜ್ಞಾನ ಸಹಭಾಗಿತ್ವ ಬಲಪಡಿಸಲು ಚರ್ಚೆ

0
MB-Patil-discussions-with-Hye-Ran-Chun-Consul-General-of-the-Republic-of-Korea

ಬೆಂಗಳೂರು: ದಕ್ಷಿಣ ಕೊರಿಯಾದೊಂದಿಗೆ ಕರ್ನಾಟಕದ ಕೈಗಾರಿಕಾ, ತಂತ್ರಜ್ಞಾನ ಮತ್ತು ಹೂಡಿಕೆ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಚೆನ್ನೈನಲ್ಲಿರುವ ದಕ್ಷಿಣ ಕೊರಿಯಾ ಗಣರಾಜ್ಯದ ಕಾನ್ಸುಲ್ ಜನರಲ್ ಹ್ಯೆ ರಾನ್ ಚುನ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ ತಂತ್ರಜ್ಞಾನ, ಏರೋಸ್ಪೇಸ್, ರಕ್ಷಣಾ ಉತ್ಪಾದನೆ ಮತ್ತು ನಿಖರ ಯಂತ್ರೋಪಕರಣಗಳ ತಯಾರಿಕೆಯಲ್ಲಿ ದಕ್ಷಿಣ ಕೊರಿಯಾ ಜಾಗತಿಕ ಮುಂಚೂಣಿಯಲ್ಲಿದೆ. ಈ ಕ್ಷೇತ್ರಗಳಲ್ಲಿ ಕರ್ನಾಟಕದ ಕೈಗಾರಿಕಾ ಸಾಮರ್ಥ್ಯ, ಪ್ರತಿಭಾನ್ವಿತ ಮಾನವ ಸಂಪನ್ಮೂಲ ಹಾಗೂ ಸಂಶೋಧನಾ ಪರಿಸರದ ಕುರಿತು ಸಚಿವರು ವಿವರಿಸಿದರು.

ಸ್ಯಾಮ್ಸಂಗ್, ಎಲ್‌ಜಿ, ಹ್ಯುಂಡೈ ಮೊಬಿಸ್ ಮತ್ತು ಡಿಎನ್ ಸೊಲ್ಯೂಷನ್ಸ್‌ನಂತಹ ಪ್ರಮುಖ ಕೊರಿಯನ್ ಕಂಪನಿಗಳು ಈಗಾಗಲೇ ಕರ್ನಾಟಕದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನಾ ಚಟುವಟಿಕೆಗಳನ್ನು ವಿಸ್ತರಿಸುತ್ತಿವೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕೊರಿಯನ್ ಇಂಡಸ್ಟ್ರಿಯಲ್ ಟೌನ್‌ಶಿಪ್ ಸ್ಥಾಪನೆಗೆ ಹೂಡಿಕೆದಾರರನ್ನು ಆಕರ್ಷಿಸುವುದು, ಪ್ರಮುಖ ಕೊರಿಯನ್ ಕಂಪನಿಗಳೊಂದಿಗೆ ನೇರ ಸಂಪರ್ಕ ಬೆಳೆಸುವುದು ಹಾಗೂ ಜಾಗತಿಕ ಹೂಡಿಕೆದಾರರ ಸಮಾವೇಶ (GIM 2027)ದಲ್ಲಿ ಹೆಚ್ಚಿನ ಕೊರಿಯನ್ ಹೂಡಿಕೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಸಹಕಾರ ಕೋರಿದರು.

ಈ ಭೇಟಿ ಎರಡೂ ದೇಶಗಳ ಉದ್ಯಮಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವುದರೊಂದಿಗೆ ರಾಜ್ಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ನೆರವಾಗಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *