ಮುಂದಿನ ವರ್ಷದಿಂದ ಮಂಗಳೂರು ದಾಸರಾಗೂ ಸರ್ಕಾರದಿಂದ ಅನುದಾನ; ಸಚಿವ ದಿನೇಶ್ ಗುಂಡೂರಾವ್

0
Mangaluru dasara- Kudroli - Sharade

ಮಂಗಳೂರು: ನಾಡಿನ ಮಹಾಉತ್ಸವವಾಗಿರುವ ಮೈಸೂರು ದಸರಾದಷ್ಟೇ ಮಂಗಳೂರು ದಸರಾ ವೈಭವಯುತವಾಗಿ ನಡೆಯುತ್ತಿದೆ. ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ದಸರಾ ನಾಡಿನ ಹೆಮ್ಮೆಯ ಉತ್ಸವವಾಗಿ ರೂಪುಗೊಂಡಿದೆ ಎಂದು ರಾಜ್ಯ ಧಾರ್ಮಿಕ ದತ್ತಿ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ‘ಮಂಗಳೂರು ದಸರಾ-2025’ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಜನಾರ್ಧನ ಪೂಜಾರಿ ಒಬ್ಬ ಅಪ್ರತಿಮ ಸಂಘಟಕ. ರಾಜಕೀಯ ನಾಯಕರಿಗೂ ಅವರು ಮಾರ್ಗದರ್ಶಕ. ಅವರ ನೇತೃತ್ವದಲ್ಲೇ ನಡೆಯುತ್ತಿರುವ ಮಂಗಳೂರು ದಸರಾವು ವರ್ಷದಿಂದ ವರ್ಷಕ್ಕೆ ವೈಭವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಂಗಳೂರು ದಸರಾ ಮಹೋತ್ಸವ ವೈಭವಯುತವಾಗಿ ನಡೆಯುತ್ತಿದ್ದು, ಮುಂದಿನ ವರ್ಷದಿಂದ ಮೈಸೂರು, ಮಡಿಕೇರಿ ಮಾದರಿಯಲ್ಲೇ ಮಂಗಳೂರು ದಸರಾಕ್ಕೂ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ನಮ್ಮ ದೇಶದ ಪ್ರಾಚೀನತೆ ಇಂದಿಗೂ ಉಳಿಯಲು ಮುಖ್ಯ ಕಾರಣ ಈ ನೆಲದ ಸಾಂಸ್ಕೃತಿಕ, ಧಾರ್ಮಿಕ ನಂಬಿಕೆ. ಅಧ್ಯಾತ್ಮ ಮತ್ತು ಸಾಂಸ್ಕೃತಿಕ ಪರಂಪರೆ ನಮ್ಮ ದೇಶದ ಶಕ್ತಿ. ಮಂಗಳೂರು ದಸರಾ ಮಹೋತ್ಸವ ಮೆರವಣಿಗೆಗೆ ರಾಜ್ಯ ಸರ್ಕಾರದಿಂದಲೇ ಕಲಾತಂಡಗಳನ್ನು ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ನಮ್ಮ ದೇಶದ ಸಂಸ್ಕೃತಿಯ ಸಾರ ಕರ್ನಾಟಕದಲ್ಲಿ, ರಾಜ್ಯದ ಸಂಸ್ಕೃತಿಯ ಸಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಈ ಜಿಲ್ಲೆಯ ಸಂಸ್ಕೃತಿಯ ಸಾರ ಕಾಣಸಿಗುವುದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ. ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ. ಈ ನೆಲದ ಶಕ್ತಿ. ಈ ಕ್ಷೇತ್ರದ ಜತೆ ಭಾವನಾತ್ಮಕ ಸಂಬಂಧ ಹೊಂದಿದವರು ನಾವು. ಆ ರೀತಿಯ ಒಡನಾಟ ಕ್ಷೇತ್ರ ಮತ್ತು ಜನಾರ್ದನ ಪೂಜಾರಿಗಳ ಜತೆಗಿದೆ. ಯಾವುದೇ ಧರ್ಮವೂ ಮನಸ್ಸು ಮತ್ತು ದೇಹಕ್ಕೆ ಘಾಸಿ ಮಾಡುವ ಕತ್ತಿಯಾಗಬಾರದು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ದೇಶ ನಮ್ಮದಾಗಿದ್ದು, ಅದೇ ಹಾದಿಯಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಭಹಾರೈಸಿದರು. ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಾಜಿ ಶಾಸಕ ಜೆ.ಆರ್.ಲೋಬೋ, ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಉಪಾಧ್ಯಕ್ಷರಾದ ಉರ್ಮಿಳಾ ರಮೇಶ್, ಟ್ರಸ್ಟಿಗಳಾದ ಸಂತೋಷ್ ಪೂಜಾರಿ, ಕೃತಿನ್ ಡಿ.ಅಮೀನ್, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ.ಬಿ.ಜಿ.ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಕಿಶೋರ್ ದಂಡೆಕೇರಿ, ಹರೀಶ್ ಕುಮಾರ್ ಉಪಸ್ಥಿತರಿದ್ದರು. ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸ್ಮಿತೇಶ್ ಎಸ್.ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ದಸರಾ ಗೌರವ ಸಮ್ಮಾನ್:

ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ನಿರ್ದೇಶಕ ಡಾ.ತುಕಾರಾಮ ಪೂಜಾರಿ, ಲೇಡಿಗೋಶನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಎಂ.ಆರ್ ಅವರಿಗೆ ‘ದಸರಾ ಗೌರವ ಸಮ್ಮಾನ್-2025’ ಪ್ರದಾನಿಸಲಾಯಿತು. ಮೂಕ ಪ್ರಾಣಿಗಳ ಸಾಕು ತಾಯಿ ಶಾಲೆಟ್ ಅವರಿಗೆ ಅಸಮಾನ್ಯ ಸ್ತ್ರೀ ಪುರಸ್ಕಾರ ನೀಡಲಾಯಿತು.

——ಬಾಕ್ಸ್—–
ಮಂಗಳೂರು ದಸರಾಕ್ಕೂ ಅನುದಾನ

Leave a Reply

Your email address will not be published. Required fields are marked *