ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ; ಬುಧವಾರವೂ ಸದನದಲ್ಲಿ ಗದ್ದಲ ಕೋಲಾಹಲ

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಪ್ರಕರಣ ಬುಧವಾರವೂ ಸಂಸತ್ ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಗದ್ದಲ ಕೋಲಾಹಲ ಸೃಷ್ಟಿಸಿತು. ಇಂದು ಬೆಳಗ್ಗೆ ಲೋಕಸಭಾ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದ ಕಾಂಗ್ರೆಸ್ ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನಖರ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸರ್ಕಾರ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು. ಯಾರೂ ನಿಮ್ಮನ್ನು ಒಪ್ಪೊದಿಲ್ಲವೋ ಅಂತವರಿಗೆ ಇದೇ ರೀತಿ ಮಾನಸಿಕ ಕಿರುಕುಳ ನೀಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಖರ್ಗೆ ದೂರಿದರು. ಇದರಿಂದ ಲೋಕಸಭೆಯಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. ಖರ್ಗೆ ಅರೋಪದಿಂದ ಆಕ್ರೋಶಗೊಂಡ ಬಿಜೆಪಿ ನಾಯಕರು, ಕಾಂಗ್ರೆಸ್ ಸಂಸದರನ್ನು ತರಾಟೆಗೆ ತೆಗೆದುಕೊಂಡರು.
ಇನ್ನೂ ತೃಣಮೂಲ ಕಾಂಗ್ರೆಸ್ ಸದಸ್ಯರು ಕೂಡ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.ಹೀಗಾಗಿ ಸದನದಲ್ಲಿ ಭಾರಿ ಗದ್ದಲ ಉಂಟಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಕೆಲಕಾಲ ಮುಂದೂಡಿದರು.
ಮತ್ತೆ ಕಲಾಪ ಸಮಾವೇಶಗೊಂಡಾಗಲು ವಿಪಕ್ಷ ಸದಸ್ಯರು ಇದೇ ವಿಚಾರವಾಗಿ ಗದ್ದಲ ಸೃಷ್ಟಿಸಿದರು. ಈ ಸಂದರ್ಭ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವೆ ವೆಂಕಯ್ಯನಾಯ್ಡು, ಕೇಂದ್ರ ಸರ್ಕಾರ ಇದರಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಸೋನಿಯಾ ಮತ್ತು ರಾಹುಲ್ ಬಗ್ಗೆ ಕೋರ್ಟ್ ಆದೇಶ ನೀಡಿದ್ದು, ಕಾಂಗ್ರೆಸ್ ಪಕ್ಷ ಪಾರ್ಲಿಮೆಂಟ್ ನಲ್ಲಿ ಗದ್ದಲ ಎಬ್ಬಿಸ ನ್ಯಾಯಂಗವನ್ನೇ ಬೆದರಿಸುವ ಕೆಲಸ ಮಾಡುತ್ತಿದೆ. ಇದು ಸರ್ವಾಧಿಕಾರಿ ಧೋರಣೆ. ಚುನಾವಣೆಯಲ್ಲಿ ಜನರು ನೀಡಿದ ತೀರ್ಪನ್ನು ಕಾಂಗ್ರೆಸ್ ಒಪ್ಪಿಕೊಳ್ಳಲು ಸಿದ್ದವಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವೆ ವೆಂಕಯ್ಯನಾಯ್ಡು ತಿರುಗೇಟು ನೀಡಿದರು.
ಇನ್ನೂ ರಾಜ್ಯಸಭೆಯಲ್ಲೂ ಇದೇ ವಿಚಾರ ಪ್ರತಿಧ್ವನಿಸಿ ಗದ್ದಲ ಕೋಲಾಹಲ ಸೃಷ್ಟಿಸಿ, ಕಲಾಪವನ್ನು ಬಲಿತೆಗೆದುಕೊಂಡಿತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು, ಪ್ರಧಾನಿ ನರೇಂದ್ರಮೋದಿ ಅವರು ಸರ್ವಾಧಿಕಾರಿ ಧೋರಣೆ ಸಹಿಸಲು ಸಾಧ್ಯವಿಲ್ಲ. ಬಿಜೆಪಿ ದ್ವೇಷದ ರಾಜಕೀಯ ನಡೆಸುತ್ತಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬಿಜೆಡಿ ಸದಸ್ಯರು ಕೂಡ ಪ್ರತಿಭಟನೆಗೆ ಕೈಜೋಡಿಸಿದರು. ಒಡಿಶಾದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಬಹು ಉದ್ದೇಶದ ಪೋಲಾವರಂ ನೀರಾವರಿ ಯೋಜನೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಭಿತ್ತಿ ಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪನೆಗೆ ಅವಕಾಶ ನೀಡುವುದಾಗಿ ಉಪಸಭಾಪತಿಗಳು ಹಲವು ಬಾರಿ ಮನವಿ ಮಾಡಿದರೂ ಪ್ರತಿಭಟನೆ ಮುಂದುವರೆದಿದ್ದರಿಂದ, ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು.
