ಸೌದಿ–ಹೌತಿ ಸಂಘರ್ಷ ನಡುವೆ ರಿಯಾದ್ ವಿಮಾನ ನಿಲ್ದಾಣ ಭಾಗಶಃ ಪುನರಾರಂಭ

0
Saudi-Arabia-Dammam-Airport-1

ರಿಯಾದ್: ಸೌದಿ ಅರೇಬಿಯಾ ಮತ್ತು ಯೆಮನ್‌ನ ಹೌತಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾಗಶಃ ಪುನರಾರಂಭಿಸಲಾಗಿದೆ.

ಹೌತಿಗಳು ಮೂರು ಹಂತಗಳಲ್ಲಿ ಕ್ಷಿಪಣಿ ದಾಳಿ ನಡೆಸಿದ್ದು, ಖಮೀಸ್ ಮುಶೈತ್ ವಾಯುನೆಲೆ ಮತ್ತು ಜಿಜಾನ್ ನೌಕಾನೆಲೆಯನ್ನೂ ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಸೌದಿ ಪಡೆಗಳು 12 ಕ್ಷಿಪಣಿಗಳು ಮತ್ತು ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿವೆ. ಕ್ಷಿಪಣಿ ಅವಶೇಷಗಳು ಬಿದ್ದ ಪರಿಣಾಮ ಸೌದಿ ಪ್ರಜೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದು, ಮೂರು ವಸತಿ ಕಟ್ಟಡಗಳು ಮತ್ತು ಏಳು ವಾಹನಗಳಿಗೆ ಹಾನಿಯಾಗಿದೆ.

ರಿಯಾದ್ ವಿಮಾನ ನಿಲ್ದಾಣ ಬಳಸಬಾರದು ಹಾಗೂ ಸೌದಿ ತೈಲ ಘಟಕಗಳ ಸಮೀಪ ತೆರಳಬಾರದು ಎಂದು ಹೌತಿಗಳು ಎಚ್ಚರಿಕೆ ನೀಡಿದ್ದಾರೆ. ಸೌದಿ ದಾಳಿಗೆ ಪ್ರತಿಯಾಗಿ ಕ್ಷಿಪಣಿ ದಾಳಿ ನಡೆಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಯೆಮನ್‌ನ ಸನಾ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಸೌದಿ ದಾಳಿ ನಡೆಸಿದೆ ಎಂದೂ ಆರೋಪಿಸಿದ್ದಾರೆ.

ಇದೇ ವೇಳೆ, ಯೆಮನ್‌ನ ಅಡೆನ್‌ನಲ್ಲಿ ಸ್ಫೋಟಗಳು ಸಂಭವಿಸಿದ್ದು, ಸಾವು-ನೋವಿನ ಮಾಹಿತಿ ಲಭ್ಯವಾಗಿಲ್ಲ. ಸೌದಿ ಅರೇಬಿಯಾದ ಭದ್ರತೆ ಮತ್ತು ಸಾರ್ವಭೌಮತ್ವ ರಕ್ಷಣೆಗೆ ಅರಬ್ ಲೀಗ್ ಬೆಂಬಲ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *