ಕರ್ನಾಟಕದ ಬರಕ್ಕೆ 3,705 ಕೋಟಿ ರೂ. ಪರಿಹಾರ ನೀಡಿ: ಪ್ರಧಾನಿ ಮೋದಿಗೆ ಖರ್ಗೆ ಮನವಿ

0
Congress-Mallikarjuna-kharge-300x174-1

ಬೆಂಗಳೂರು: ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ರಾಜ್ಯಕ್ಕೆ ತುರ್ತು ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿಗೆ ಬರೆದಿರುವ ಪತ್ರವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಖರ್ಗೆ, ಕರ್ನಾಟಕವು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಗಂಭೀರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಶೇ.58ರಷ್ಟು ಮಳೆ ಕೊರತೆಯಾಗಿದ್ದು, ವ್ಯಾಪಕ ಬೆಳೆ ನಷ್ಟ ಉಂಟಾಗಿದೆ. ಇದರಿಂದ ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಬರದಿಂದ ಅಂದಾಜು 18,748.23 ಕೋಟಿ ರೂ. ನಷ್ಟ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 3,705.30 ಕೋಟಿ ರೂ. ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದೆ. ರಾಜ್ಯ ಕೋರಿರುವ ಸಂಪೂರ್ಣ ಮೊತ್ತವನ್ನು ಯಾವುದೇ ಅನಗತ್ಯ ಕಡಿತವಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

ಬರ ಪರಿಸ್ಥಿತಿಯ ಪರಿಶೀಲನೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ತಂಡವನ್ನು ತಕ್ಷಣ ಕಳುಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಜತೆಗೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡುವ ಇನ್‌ಪುಟ್ ಸಬ್ಸಿಡಿ ಲೆಕ್ಕಾಚಾರಕ್ಕೆ ಹಳೆಯ 2015-16ರ ಕೃಷಿ ಗಣತಿಯ ಬದಲಾಗಿ ಕರ್ನಾಟಕದ ನವೀಕೃತ ‘ಭೂಮಿ’ ಭೂ ದಾಖಲೆಗಳನ್ನು ಬಳಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಸ್ತುತ ಸ್ಥಳ ಪರಿಶೀಲನೆ ನಡೆಯುತ್ತಿರುವ 11 ಹೆಚ್ಚುವರಿ ತಾಲೂಕುಗಳು ಸೇರಿದಂತೆ ಅರ್ಹ ಪ್ರದೇಶಗಳಲ್ಲಿ ಬರ ಘೋಷಣಾ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಕೇಂದ್ರದ ನೆರವು ಪಡೆಯುವ ಉದ್ದೇಶಕ್ಕಾಗಿ ಇವುಗಳನ್ನು ಒಂದೇ ನಿರಂತರ ಬರ ಘಟನೆಯ ಭಾಗವಾಗಿ ಪರಿಗಣಿಸಬೇಕು ಎಂದು ಖರ್ಗೆ ಹೇಳಿದ್ದಾರೆ.

ಕಾವೇರಿ ಹಾಗೂ ಜಲವಿದ್ಯುತ್ ಯೋಜನೆಗಳ ಜಲಾನಯನ ಪ್ರದೇಶಗಳ ಜಲಾಶಯಗಳಲ್ಲಿ ನೀರಿನ ಮಟ್ಟ ಐತಿಹಾಸಿಕವಾಗಿ ಕುಸಿದಿರುವುದನ್ನು ಉಲ್ಲೇಖಿಸಿರುವ ಅವರು, ಕುಡಿಯುವ ನೀರಿನ ಭದ್ರತೆ ಮತ್ತು ಪರ್ಯಾಯ ವಿದ್ಯುತ್ ವೆಚ್ಚಕ್ಕಾಗಿ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವಂತೆ ಕೇಂದ್ರವನ್ನು ಕೋರಿದ್ದಾರೆ.

ರಾಜ್ಯಾದ್ಯಂತ 31 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳು ಸಂಕಷ್ಟದಲ್ಲಿದ್ದು, ರಾಜಕೀಯ ಭೇದಭಾವವಿಲ್ಲದೆ ಅರ್ಹತೆಯ ಆಧಾರದ ಮೇಲೆ ತುರ್ತಾಗಿ ನೆರವು ಬಿಡುಗಡೆ ಮಾಡಬೇಕು ಎಂದು ಖರ್ಗೆ ಹೇಳಿದ್ದಾರೆ.

ಬರ ಪರಿಹಾರವು ಮಾನವೀಯ ಅಗತ್ಯವಾಗಿದ್ದು, ಕೇಂದ್ರ-ರಾಜ್ಯಗಳ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಕ್ರಮ ಕೈಗೊಳ್ಳಬೇಕಿದೆ. ಸಂಕಷ್ಟದಲ್ಲಿರುವ ಜನರಿಗೆ ಆಹಾರ, ಮೇವು, ಕುಡಿಯುವ ನೀರು ಹಾಗೂ ಜೀವನೋಪಾಯದ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಇದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಪತ್ರ ಬರೆದಿರುವುದಾಗಿ ಖರ್ಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *