ಅ.11ರಿಂದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ; ಆರು ದಿನಗಳ ಕಾರ್ಯಕ್ರಮ

0
krs-amrithmahotsava-krishnarajasagara-1

ಬೆಂಗಳೂರು: ಶ್ರೀರಂಗಪಟ್ಟಣ ದಸರಾ ಅಂಗವಾಗಿ ಕೆಆರ್‌ಎಸ್‌ನಲ್ಲಿ ಅ.11ರಿಂದ ಸಂಪ್ರದಾಯಬದ್ಧ ಕಾವೇರಿ ಆರತಿ ಆರಂಭವಾಗಲಿದೆ. ಆರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ಆರತಿ ಆಯೋಜನೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಳೆದ ವರ್ಷ ಮೊದಲ ಬಾರಿಗೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಆರಂಭಿಸಲಾಗಿತ್ತು. ಸಾಂಪ್ರದಾಯಿಕ ಆಚರಣೆ ಮುಂದುವರಿಯಬೇಕು ಎಂಬ ಉದ್ದೇಶದಿಂದ ಈ ಬಾರಿಯೂ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬರ ಪರಿಸ್ಥಿತಿ ಹಾಗೂ ಕಾವೇರಿ ನೀರು ಹಂಚಿಕೆ ವಿಚಾರಗಳ ನಡುವೆಯೂ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವಂತೆ ಆರತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಕಳೆದ ಬಾರಿ ಕಾವೇರಿ ಆರತಿ ಆಯೋಜನೆಯಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ಬಳಸಿಕೊಂಡು ಈ ಬಾರಿಯ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸುವಂತೆ ಸಚಿವರು ಸೂಚಿಸಿದರು.

ಪಾರ್ಕಿಂಗ್ ಸ್ಥಳದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಉಚಿತ ಬಸ್ ವ್ಯವಸ್ಥೆ, ರಸ್ತೆ ನಿರ್ಮಾಣ, ಎಲ್‌ಇಡಿ ಪರದೆಗಳು, ಭವ್ಯ ವೇದಿಕೆ, ಧ್ವನಿ–ಬೆಳಕು ವ್ಯವಸ್ಥೆ, ವಾದ್ಯಗಳು, ಪೂಜಾ ಸಾಮಗ್ರಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶಿಸಿದರು.

ಮುಖ್ಯಮಂತ್ರಿಗಳ ಉಪಸ್ಥಿತಿಯ ಹಿನ್ನೆಲೆಯಲ್ಲಿ ಭದ್ರತಾ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದೇ ವೇಳೆ ಸಾರ್ವಜನಿಕರಿಗೆ ಯಾವುದೇ ಅನಾನುಕೂಲವಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಕಳೆದ ಬಾರಿಯ ಕಾವೇರಿ ಆರತಿ ಮೇಲ್ವಿಚಾರಣೆ ನಡೆಸಿದ್ದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಸಚಿವರು ಸಮಾಲೋಚನೆ ನಡೆಸಿದರು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಈ ಬಾರಿಯ ಆರು ದಿನಗಳ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸುವಂತೆ ಸೂಚಿಸಿದರು.

ಸಭೆಯಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ, ಪೂಜಾ ವಿಧಿವಿಧಾನಗಳು ಹಾಗೂ ವಾರಾಣಸಿಯಿಂದ ಆಗಮಿಸುವ ಅರ್ಚಕರ ತಂಡದ ವಾಸ್ತವ್ಯ ಸೇರಿದಂತೆ ವಿವಿಧ ವ್ಯವಸ್ಥೆಗಳ ಕುರಿತು ಪರಿಶೀಲಿಸಲಾಯಿತು.

ಆರು ದಿನವೂ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸಂಜೆ ಹಾಗೂ ಹಾಸ್ಯ ಸಂಜೆ ಆಯೋಜಿಸಲು ನಿರ್ಧರಿಸಲಾಗಿದೆ.

ಸಭೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಒ ನಂದಿನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತೆ ಮಂಜುಶ್ರೀ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed