ದುನಿಯಾ ವಿಜಯ್‌-ನಾಗರತ್ನಗೆ ವಿಚ್ಛೇದನ: ಆದೇಶಕ್ಕೆ ತಲೆಬಾಗುವುದಾಗಿ ಹೇಳಿದ ನಟ

0
DUNIYA-VIJAY-220x300-1

ಬೆಂಗಳೂರು: ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್‌ ಮತ್ತು ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಗುರುವಾರ ಕರ್ನಾಟಕ ಹೈಕೋರ್ಟ್‌ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್‌ ಹಾಗೂ ಎಚ್. ಶಾಂತಿಭೂಷಣ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ನಾಗರತ್ನ ಹಾಗೂ ಮೂವರು ಮಕ್ಕಳ ಹಿತವನ್ನು ಪರಿಗಣಿಸಿದ ನ್ಯಾಯಾಲಯ, ವಿಜಯ್‌ ಅವರ ಸ್ಥಾನಮಾನ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ನೀಡುವಂತೆ ಆದೇಶಿಸಿದೆ ಎಂದು ವರದಿಯಾಗಿದೆ.

ಆದೇಶ ಹೊರಬಂದ ಬೆನ್ನಲ್ಲೇ ದುನಿಯಾ ವಿಜಯ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ, ನ್ಯಾಯಾಲಯದ ತೀರ್ಪನ್ನು ಗೌರವದಿಂದ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ. ನ್ಯಾಯಾಲಯದ ಮೇಲಿನ ತಮ್ಮ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ ಎಂದಿರುವ ಅವರು, ತಮ್ಮ ಮೇಲಿನ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿ ನ್ಯಾಯಾಲಯ ನೀಡಿರುವ ಆದೇಶಕ್ಕೆ ತಲೆಬಾಗುವುದಾಗಿ ಹೇಳಿದ್ದಾರೆ.

ವಿಚ್ಛೇದನದ ವಿಚಾರವಾಗಿ ಇನ್ನು ಮುಂದೆ ಮಾಧ್ಯಮಗಳಾಗಲಿ ಅಥವಾ ಸಾರ್ವಜನಿಕವಾಗಲಿ ಮಾತನಾಡುವುದಿಲ್ಲ ಎಂದು ವಿಜಯ್‌ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೆಣ್ಣುಮಕ್ಕಳು ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಹೊಂದಿದ್ದು, ಅವರಿಗೆ ಯಾವುದೇ ಮುಜುಗರವಾಗಬಾರದು. ಮಕ್ಕಳ ಭವಿಷ್ಯ ಹಾಗೂ ಹಿತದೃಷ್ಟಿಯಿಂದ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶವನ್ನು ಆತ್ಮಸಾಕ್ಷಿಯಿಂದ ಸ್ವೀಕರಿಸಿ, ಹೊಸ ಬದುಕಿನತ್ತ ಹೆಜ್ಜೆ ಇಡುತ್ತಿರುವುದಾಗಿ ತಿಳಿಸಿದ್ದಾರೆ.

ವಿಜಯ್‌ ಮತ್ತು ನಾಗರತ್ನ ದಂಪತಿಗೆ ಮೋನಿಷಾ, ಮೋನಿಕಾ ಹಾಗೂ ಸಾಮ್ರಾಟ್‌ ಎಂಬ ಮೂವರು ಮಕ್ಕಳಿದ್ದಾರೆ. 2013ರಲ್ಲಿ ವಿಜಯ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2014ರಲ್ಲಿ ಸಂಧಾನದ ಬಳಿಕ ಅರ್ಜಿಯನ್ನು ಹಿಂಪಡೆಯಲಾಗಿತ್ತು.

ಆದರೆ 2018ರಲ್ಲಿ ವಿಜಯ್‌ ಮತ್ತೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಸುಮಾರು ಆರು ವರ್ಷಗಳ ವಿಚಾರಣೆಯ ಬಳಿಕ 2024ರ ಜೂನ್‌ನಲ್ಲಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು ಅವರ ಅರ್ಜಿಯನ್ನು ವಜಾಗೊಳಿಸಿತ್ತು.

ಈ ಆದೇಶ ಪ್ರಶ್ನಿಸಿ ವಿಜಯ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್‌ ವಿಚ್ಛೇದನ ಮಂಜೂರು ಮಾಡಿದ್ದು, ದುನಿಯಾ ವಿಜಯ್‌ ಮತ್ತು ನಾಗರತ್ನ ಅವರ ದಾಂಪತ್ಯಕ್ಕೆ ಅಧಿಕೃತ ಅಂತ್ಯ ಬಿದ್ದಿದೆ

Leave a Reply

Your email address will not be published. Required fields are marked *