ಒಂದು ವರ್ಷದೊಳಗೆ 10.71 ಲಕ್ಷ ದರಖಾಸ್ತು ಪೋಡಿ ಪ್ರಕರಣ ಇತ್ಯರ್ಥಕ್ಕೆ ಸರ್ಕಾರದ ಕ್ರಮ

ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ 10.71 ಲಕ್ಷ ದರಖಾಸ್ತು ಪೋಡಿ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಡಿಡಿಎಲ್ಆರ್ಗಳು, ಉಪವಿಭಾಗಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಾಲ್ಲೂಕಿನಲ್ಲಿ ಪ್ರತಿದಿನ ಕನಿಷ್ಠ 15 ದರಖಾಸ್ತು ಪೋಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿ, 15 ಹೊಸ ಪಹಣಿಗಳನ್ನು ಸೃಜಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿಸಿದರು.

ಭೂಮಾಪನಕ್ಕಾಗಿ ಖರೀದಿಸಿರುವ ರೋವರ್ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಭೂದಾಖಲೆಗಳ ಸಮಸ್ಯೆಗಳನ್ನು ಬಗೆಹರಿಸಬೇಕು. ರೈತರು ಭೂದಾಖಲೆಗಳಿಗಾಗಿ ಕಂದಾಯ ಕಚೇರಿಗಳಿಗೆ ಪದೇಪದೆ ಅಲೆಯುವ ಪರಿಸ್ಥಿತಿ ಇರಬಾರದು. ಬಾಕಿ ಪ್ರಕರಣಗಳನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಿ, ರೈತರಿಗೆ ಸಕಾಲದಲ್ಲಿ ಸೇವೆ ಒದಗಿಸುವುದು ಅಧಿಕಾರಿಗಳ ಆದ್ಯತೆಯಾಗಬೇಕು ಎಂದು ಸೂಚಿಸಿರುವುದಾಗಿ ಹೇಳಿದರು.
