ಕರ್ನಾಟಕದಲ್ಲಿ ₹6,825 ಕೋಟಿ ಹೂಡಿಕೆಯ 147 ಕೈಗಾರಿಕಾ ಯೋಜನೆಗಳು; 18,600ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯ ನಿರೀಕ್ಷೆ

0
MBPatil-MB-Patil-750x470-1-1

ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು ₹6,825 ಕೋಟಿ ಹೂಡಿಕೆಯ 147 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಇದರಿಂದ 18,600ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ 161ನೇ ಸಭೆಯಲ್ಲಿ ಈ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಅನುಮೋದನೆ ಪಡೆದ ಯೋಜನೆಗಳ ಪೈಕಿ 131 ಯೋಜನೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಹೊರಗೆ ಸ್ಥಾಪನೆಯಾಗಲಿವೆ. ಈ ಮೂಲಕ ಬೆಂಗಳೂರಿನಾಚೆಗೂ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡಲು ಸರ್ಕಾರ ಆದ್ಯತೆ ನೀಡಿದೆ.

ಆಹಾರ ಸಂಸ್ಕರಣೆ, ಜವಳಿ, ಡೇಟಾ ಸೆಂಟರ್, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ಮಾಹಿತಿ ತಂತ್ರಜ್ಞಾನ ಮತ್ತು ಸಾಮಾನ್ಯ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಲಯಗಳ ಯೋಜನೆಗಳು ಅನುಮೋದನೆ ಪಡೆದಿವೆ.

ಇವುಗಳಲ್ಲಿ ತಲಾ ₹50 ಕೋಟಿಗೂ ಅಧಿಕ ಹೂಡಿಕೆಯ 36 ಬೃಹತ್ ಮತ್ತು ಮಧ್ಯಮ ಗಾತ್ರದ ಯೋಜನೆಗಳೂ ಸೇರಿವೆ. ಈ ಯೋಜನೆಗಳ ಒಟ್ಟು ಹೂಡಿಕೆ ₹4,507.71 ಕೋಟಿಯಾಗಿದ್ದು, 12,074 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಹೂಡಿಕೆ ಆಕರ್ಷಣೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಸಾಧಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಪಾಟೀಲ್ ಹೇಳಿದರು.

ಬೆಂಗಳೂರನ್ನು ಜಾಗತಿಕ ಹೂಡಿಕಾ ಕೇಂದ್ರವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವುದರ ಜತೆಗೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕಾ ಬೆಳವಣಿಗೆಯ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *