ಕಲಬುರಗಿ: ಸೆಪ್ಟೆಂಬರ್‌ನಲ್ಲಿ ಜಯದೇವ ಆಸ್ಪತ್ರೆ ಲೋಕಾರ್ಪಣೆ
ಕಲಬುರಗಿ: ಕಲಬುರಗಿಯಲ್ಲಿ ಸುಮಾರು 192 ಕೋಟಿ ರೂ. ಕೆ.ಕೆ.ಆರ್.ಡಿ.ಬಿ. ಅನುದಾನದಡಿ ನಿರ್ಮಿಸುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆಯ ಶೇ. 90ರಷ್ಟು ಕಾಮಗಾರಿ ಮುಗಿದಿದ್ದು, ಬಾಕಿ ಇರುವ ವಿದ್ಯುತ್ ಪೂರೈಕೆ ಕಾರ್ಯವು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್‌ನಲ್ಲಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದ ಸಚಿವರು, 371 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆ ಲೋಕಾರ್ಪಣೆಗೊಳ್ಳಿದ ಬಳಿಕ, ಜಿಮ್ಸ್‌ನಲ್ಲಿನ ಆಸ್ಪತ್ರೆಯನ್ನು ಒಂದೇ ವಾರದಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ಕಟ್ಟಡದಲ್ಲಿ ಕಿಚನ್ ಸೇರಿದಂತೆ ಹೆಚ್ಚುವರಿ ಕಾಮಗಾರಿಗಳು ಸೇರ್ಪಡೆಯಾಗಿರುವುದರಿಂದ 72 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ಪಡೆಯಲಾಗುವುದು ಎಂದರು. ಈಗಾಗಲೇ ವೈದ್ಯಕೀಯ ಸಲಕರಣೆಗಳಿಗೂ ಟೆಂಡರ್ ಕರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ, ನೂತನ ಜಯದೇವ ಆಸ್ಪತ್ರೆಯಲ್ಲಿ ವಸ್ಕುಲರ್ ಸರ್ಜರಿ ವಿಭಾಗವನ್ನು ಸಹ ಮಂಜೂರು ಮಾಡಲಾಗಿದ್ದು, ಈ ವಿಭಾಗಕ್ಕೆ ಇಬ್ಬರು ವೈದ್ಯರನ್ನು ನೇಮಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿಯೇ ಇದು ಮೊದಲ ವಸ್ಕುಲರ್ ಸರ್ಜರಿ ವಿಭಾಗವಾಗಿದ್ದು, ಈ ಪ್ರದೇಶದ ಬಡಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲು ಸಹಾಯವಾಗಲಿದೆ. ನೂತನ ಕಟ್ಟಡದ ನಿರ್ಮಾಣ ಪೂರ್ಣಗೊಳ್ಳಿದ ನಂತರ, ಹಾಸಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದು ಡಾ. ಪಾಟೀಲ ಅವರು ಸ್ಪಷ್ಟನೆ ನೀಡಿದರು.
150 ಹಾಸಿಗೆಯ ಇಂದಿರಾಗಾಂಧಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೆಲ್ತ್ ಅಲೈಡ್ ಸೈನ್ಸ್ ಕಾಲೇಜು..
150 ಹಾಸಿಗೆಯ ಇಂದಿರಾಗಾಂಧಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹೆಲ್ತ್ ಅಲೈಡ್ ಸೈನ್ಸ್ ಕಾಲೇಜು ನಿರ್ಮಾಣಕ್ಕಾಗಿ 10 ಎಕರೆ ಭೂಮಿ ಹಾಗೂ 120 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಸ್ಥಾಪನೆಗಾಗಿ 25 ಎಕರೆ ಭೂಮಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯ ಒದಗಿಸಲಿದೆ. ಈ ಯೋಜನೆಯಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ತರಬೇತಿ ಪಡೆಯಲು ಉತ್ತಮ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ 1.62 ಲಕ್ಷ ಜನ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಗೆ ಹೆಸರು ನೋಂದಾಯಿಸಿದ್ದು, ಇದರಲ್ಲಿ ಅರ್ಹ 1.30 ಲಕ್ಷ ಜನರಿಗೆ ಮಾಸಿಕ 1,500 ಮತ್ತು 3,000 ರೂ. ಹಣ ಡಿ.ಬಿ.ಟಿ. ಮೂಲಕ ಪಾವತಿಸಲಾಗುತ್ತಿದೆ. ಉಳಿದವರ ಅರ್ಜಿ ಅಪೂರ್ಣವಾಗಿದ್ದು, ಪ್ರತಿ ತಿಂಗಳು 25ನೇ ತಾರೀಖಿನೊಳಗೆ ಉದ್ಯೋಗ ಪಡೆಯದಿರುವ ಬಗ್ಗೆ ದೃಢೀಕರಣ ನೀಡುವುದು ಕಡ್ಡಾಯವಾಗಿರುವುದರಿಂದ, ಅಭ್ಯರ್ಥಿಗಳು ಇದನ್ನು ಸಲ್ಲಿಸಿದರೆ ಬಾಕಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.
ಕಲಬುರಗಿ ಪುರುಷರ ಐ.ಟಿ.ಐ. ಕಾಲೇಜು ನವೀಕರಣಕ್ಕಾಗಿ ಸುಮಾರು 20 ಕೋಟಿ ರೂ. ವೆಚ್ಚವನ್ನು ಮಂಜೂರು ಮಾಡಲಾಗಿದ್ದು, ಆಯವ್ಯಯದ ಘೋಷಣೆಯಂತೆ ಮೊದಲ ಹಂತದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ, ಬಳ್ಳಾರಿ, ವಿಜಯಪುರ ಮತ್ತು ರಾಯಚೂರು ಸೇರಿ 6 ಐ.ಟಿ.ಐ. ಕಾಲೇಜುಗಳ ನವೀಕರಣ ನಡೆಯಲಿದೆ ಎಂದು ಡಾ. ಪಾಟೀಲ ಅವರು ತಿಳಿಸಿದ್ದಾರೆ.
ಕಲಬುರಗಿ ಜಯದೇವ ಆಸ್ಪತ್ರೆಯಲ್ಲಿ ನೌಕರಿ ಕೊಡಿಸುತ್ತೇವೆ ಎಂಬ ಸುಳ್ಳು ವಾಗ್ದಾನಗಳೊಂದಿಗೆ, ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಕುರಿತು, ಆಸ್ಪತ್ರೆಯ ಅಧಿಕಾರಿಗಳು ತಕ್ಷಣವೇ ಗಮನಿಸಿ, ಪೊಲೀಸರಿಗೆ ದೂರು ನೀಡಿದರು. ಪೊಲೀಸರು ರಾಜಶೇಖರ್ ಮತ್ತು ಸಂತೋಷ ಎಂಬವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ನೇಮಕಾತಿ ಕುರಿತಂತೆ ಸುಳ್ಳು ಸುದ್ದಿಗೆ ಕಿವಿ ಕೊಡಬಾರದು. ಯಾರಾದರು ಹಣ ಕೇಳಿದರೆ, ಪೊಲೀಸ್ ಠಾಣೆಗೆ ದೂರು ನೀಡುವಂತೆ ಡಾ. ಪಾಟೀಲ ಮನವಿ ಮಾಡಿದರು.
ಈ ಸಂದರ್ಭದಲ್ಲಿ, ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಕೆ.ಸಿ. ರವೀಂದ್ರನಾಥ, ಹಣಕಾಸು ಸಲಹೆಗಾರ ಅವಿನಾಶ, ಮತ್ತು ಸಮನ್ವಯಾಧಿಕಾರಿ ಸಂತೋಷ ಉಪಸ್ಥಿತರಿದ್ದರು.