ಕೃಷ್ಣ ಬೈರೇಗೌಡ ಅವರು ಅಸಹಾಯಕ ಸಚಿವ? ಏನಿದು ಟ್ವೀಟಾಸ್ತ್ರ?

Krishna Byregowda

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ದದ ಡಿನೋಟಿಫಿಕೇಷನ್ ಆರೋಪ ಮಾಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಗ್ಗೆ ಜಾತ್ಯತೀತ ಜನತಾ ದಳ ಗರಂ ಆಗಿದೆ. ಯಾರನ್ನೋ ಮೆಚ್ಚಿಸಲು ಪ್ರೆಸ್ ಮೀಟ್ ಮಾಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಜೆಡಿಎಸ್ ಪಕ್ಷ ಟೀಕಾಸ್ತ್ರ ಪ್ರಯೋಗಿಸಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಜೆಡಿಎಸ್, ಸಚಿವ ಕೃಷ್ಣ ಬೈರೇಗೌಡ ಅವರ ಅಸಹಾಯಕತೆಗೆ ಮರುಕವಿದೆ ಎಂದು ಟೀಕಿಸಿದೆ. ಸಚಿವ ಕೃಷ್ಣ ಬೈರೇಗೌಡ ಅವರ ಅಸಮರ್ಥತೆಯಿಂದ ರಾಜ್ಯದಲ್ಲಿ ಕಂದಾಯ ಇಲಾಖೆ ಹಳ್ಳ ಹಿಡಿದಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳು ಭ್ರಷ್ಟಾಚಾರದ ಕೊಂಪೆಯಾಗಿದ್ದು, ಲಂಚವಿಲ್ಲದೇ ಅಲ್ಲಿ ಯಾವುದೇ ಕಡತಗಳು ಮೇಲೇಳುವುದಿಲ್ಲ ಎಂದು ಆರೋಪಿಸಿರುವ ಜೆಡಿಎಸ್, ಯಾರನ್ನೋ ಮೆಚ್ಚಿಸಲು ಪ್ರೆಸ್ ಮೀಟ್ ಮಾಡುವುದನ್ನು ಬಿಟ್ಟು, ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಮೊದಲು ಕಡಿವಾಣ ಹಾಕಿ ಎಂದು ಎದಿರೇಟು ನೀಡಿದೆ.

ಗುಂಡಿ ಮುಚ್ಚಿ ಎಂದು ಅಸಹಾಯಕರಾಗಿ ಟ್ವೀಟ್ ಮಾಡಿದ್ರಲ್ಲ, ಆ ರಸ್ತೆ ಗುಂಡಿ ಮುಚ್ಚಿದ್ರಾ..? ಮೊದಲು ಮತಹಾಕಿದ ನಿಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರ ಕಾಲೆಳೆದಿರುವ ಜೆಡಿಎಸ್, ರಾಜ್ಯದ ಅಭಿವೃದ್ಧಿಗೆ ತಿಲಾಂಜಲಿ ಇಟ್ಟು, ಹಗರಣಗಳಲ್ಲೇ ಮುಳುಗಿರುವ ಕಡು ಭ್ರಷ್ಟ ಸರ್ಕಾರ ನಿಮ್ಮದು ಎಂದು ಗೇಲಿಮಾಡಿದೆ.

You may have missed