ಐಪಿಎಲ್ ಹರಾಜು: ವ್ಯಾಟ್ಸನ್ ಗೆ ಗರಿಷ್ಠ ಮೊತ್ತ, ಪವನ್ ನೇಗಿಗೆ 8.5 ಕೋಟಿ

ಬೆಂಗಳೂರು : ಶನಿವಾರ ಇಲ್ಲಿಯ ಗಾರ್ಡೆನಿಯಾದಲ್ಲಿ ನಡೆದ ಐಪಿಎಲ್ ನ 9ನೇ ಆವೃತ್ತಿ ಹರಾಜು ಪ್ರಕ್ರಿಯೆ ಹಲವು ಅಚ್ಚರಿಗಳಿಗೆ ಕಾರಣವಾಯಿತು. ಆಸ್ಟ್ರೇಲಿಯದ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಅವರು ರಾಯಲ್ ಚ್ಯಾಲೆಂಜರ್ ಬೆಂಗಳೂರು ತಂಡಕ್ಕೆ 9.5 ಕೋಟಿ ರೂ. ಮೊತ್ತಕ್ಕೆ ಹರಾಜಾಗಿದ್ದಾರೆ. ಆ ಮೂಲಕ ಅವರು 2016ರ ಸಾಲಿನ ಐಪಿಎಲ್ ಕೂಟದ ಮೊತ್ತ ಮೊದಲ ಮಿಲಿಯನ್ ಡಾಲರ್ ಧನಿಕ ಎನಿಸಿಕೊಂಡಿದ್ದಾರೆ. ಇನ್ನು ಹಿಂದಿನ ಎರಡು ಐಪಿಎಲ್ ಆವೃತ್ತಿಯಲ್ಲಿ ಅಧಿಕ ಮೊತ್ತಕ್ಕೆ ಬಿಕರಿಯಾಗಿದ್ದ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಈ ಬಾರಿ 7 ಕೋಟಿಗೆ ಸನ್ ರೈಸರ್ಸ್ ಪಾಲಾದರು. ಕಳೆದ ಎರಡು ಆವೃತ್ತಿಯ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ಅರ್ಧ ಬೆಲೆಗೆ ಮಾರಾಟವಾದರು. ಹರಾಜಿನಲ್ಲಿಯೇ ಹೆಚ್ಚು ಅಚ್ಚರಿಗೆ ಕಾರಣವಾಗಿದ್ದು, ಪವನ್ ನೇಗಿಯ ಬೆಲೆ. ಅವರನ್ನು ದೆಹಲಿ ಡೇರ್ ಡೇವಿಲ್ಸ್ 8.5 ಕೋಟಿಗೆ ಖರೀದಿಸಿತು. ಇದು ಹಲವರನ್ನು ಹುಬ್ಬೆರುವಂತೆ ಮಾಡಿತು. ಪವನ್ ನೇಗಿ ಇನ್ನು ಒಂದು ಅಂತರಾಷ್ಟ್ರೀಯ ಪಂದ್ಯವನ್ನು ಆಡದಿರುವುದು ವಿಶೇಷ. ಆದರೆ, ದೇಶಿಯ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದರ ಆಧಾರದಲ್ಲಿ ಪವನ್ ಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದೇ ರೀತಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರನ್ನು ಸನ್ ರೈಸರ್ಸ್ ತಂಡಕ್ಕೆ 5.5 ಕೋಟಿ ರೂ.ಗಳಿಗೆ ಹರಾಜಾಗಿದ್ದಾರೆ. ಸಂಜು ಸ್ಯಾಮ್ಸನ್ ಅವರು ಡೆಲ್ಲಿ ಡೇರ್‌ಡೆವಿಲ್ ತಂಡಕ್ಕೆ 4.2 ಕೋಟಿ ರೂ.ಗಳಿಗೆ ಹರಾಜಾಗಿದ್ದಾರೆ.
ವಿಶೇಷವೆಂಬಂತೆ ಲಂಕೆಯ ಮಾಹೇಲ ಜಯವರ್ಧನ, ಆಸ್ಟ್ರೇಲಿಯದ ಮೈಕೆಲ್ ಹಸ್ಸಿ ಮತ್ತು ಉಸ್ಮಾನ್ ಖ್ವಾಜಾ ಅವರು ಯಾವುದೇ ತಂಡಕ್ಕೆ ಹರಾಜಾಗಿಲ್ಲ. ಇದೇ ರೀತಿ ರೈಲೀ ರೋಸೋವ್, ಚೇತೇಶ್ವರ ಪೂಜಾರ, ಆಸ್ಟ್ರೇಲಿಯದ ಆರನ್ ಫಿಂಚ್, ಕಿವೀಸ್ ದಾಂಡಿಗ ಮಾರ್ಟಿನ್ ಗುಪ್ಟಿಲ್ ಕೂಡ ಯಾವುದೇ ತಂಡಕ್ಕೆ ಹರಾಜಾಗಿಲ್ಲ.
ಭಾರತ ತಂಡದ ವೇಗದ ಎಸೆಗಾರ ಇಶಾಂತ್ ಶರ್ಮಾ ಘವರು ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ತಂಡಕ್ಕೆ 3.8 ಕೋಟಿ ರೂ.ಗಳಿಗೆ ಹರಾಜಾಗಿದ್ದಾರೆ.
ವಿಂಡೀಸ್ ಆಟಗಾರ ಡ್ವೆ„ನ್ ಸ್ಮಿತ್ ಅವರು ಗುಜರಾತ್ ಲಯನ್ಸ್ ತಂಡಕ್ಕೆ 2.3 ಕೋಟಿ ರೂ.ಗಳಿಗೆ ಮತ್ತು ಕೆವಿನ್ ಪೀಟರ್‌ಸನ್ ಅವರು ರೈಸಿಂಗ್ ಪುಣೆ ತಂಡಕ್ಕೆ 3.5 ಕೋಟಿ ರೂ.ಗಳಿಗೆ ಹರಾಜಾಗಿದ್ದಾರೆ.
