ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಸಮರ; ಒಂಬತ್ತು ತಿಂಗಳಲ್ಲಿ 1 ಕೋಟಿ ಎಚ್‌ಪಿವಿ ಲಸಿಕೆ ಡೋಸ್ ವಿತರಣೆ

0
HPV-Health-Tips-2

ನವದೆಹಲಿ: ಫೆಬ್ರವರಿ 2026ರಲ್ಲಿ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನ ಆರಂಭಿಸಿದ ಬಳಿಕ, ಭಾರತವು ಒಂಬತ್ತು ತಿಂಗಳಿಗೂ ಕಡಿಮೆ ಅವಧಿಯಲ್ಲಿ 1 ಕೋಟಿಗೂ ಹೆಚ್ಚು ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ವಿತರಿಸಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಇದೊಂದು ಮಹತ್ವದ ಸಾಧನೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಅಭಿಯಾನದಡಿ, 14 ವರ್ಷದ ಬಾಲಕಿಯರಿಗೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಪೋಷಕರ ಒಪ್ಪಿಗೆಯೊಂದಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ. ವಾರ್ಷಿಕ 1.2 ಕೋಟಿ ಬಾಲಕಿಯರ ಗುರಿಯಲ್ಲಿ ಈವರೆಗೆ ಶೇ.87ರಷ್ಟು ಸಾಧಿಸಲಾಗಿದೆ.

ಗುಜರಾತ್, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮಿಜೋರಾಂ, ಮಧ್ಯಪ್ರದೇಶ ಮತ್ತು ಬಿಹಾರ ಶೇ.100ರಷ್ಟು ಗುರಿ ತಲುಪಿವೆ. ಕರ್ನಾಟಕ ಶೇ.93.16, ಅಸ್ಸಾಂ ಶೇ.95.63, ತೆಲಂಗಾಣ ಶೇ.95.28 ಮತ್ತು ಉತ್ತರಾಖಂಡ ಶೇ.90.17ರಷ್ಟು ವ್ಯಾಪ್ತಿ ದಾಖಲಿಸಿವೆ.

ಲಸಿಕೆ ಪಡೆದವರ ಸಂಖ್ಯೆಯಲ್ಲಿ ಉತ್ತರ ಪ್ರದೇಶ 29.33 ಲಕ್ಷಕ್ಕೂ ಹೆಚ್ಚು, ಬಿಹಾರ 13.70 ಲಕ್ಷ ಮತ್ತು ಗುಜರಾತ್ 7.75 ಲಕ್ಷದೊಂದಿಗೆ ಮುಂಚೂಣಿಯಲ್ಲಿವೆ.

ಕೇಂದ್ರ ಆರೋಗ್ಯ ಸಚಿವಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯ, ಆರೋಗ್ಯ ಕಾರ್ಯಕರ್ತರ ಶ್ರಮ ಹಾಗೂ ಪೋಷಕರ ಜಾಗೃತಿಯಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ತಿಳಿಸಿದೆ. ‘ಯು-ವಿನ್’ ವೇದಿಕೆಯ ಮೂಲಕ ಲಸಿಕೆ ವಿತರಣೆ, ಫಲಾನುಭವಿಗಳ ನೋಂದಣಿ, ಸ್ಲಾಟ್ ಬುಕಿಂಗ್ ಮತ್ತು ಪ್ರಮಾಣಪತ್ರಗಳ ನಿರ್ವಹಣೆ ಮಾಡಲಾಗುತ್ತಿದೆ.

ಅರ್ಹ ಬಾಲಕಿಯರಿಗೆ ಲಸಿಕೆ ನೀಡುವ ಅಭಿಯಾನ ಮುಂದುವರಿಯಲಿದ್ದು, ಪೋಷಕರು ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಲು ಅಥವಾ ಯು-ವಿನ್ ಮೂಲಕ ಸ್ಲಾಟ್ ಕಾಯ್ದಿರಿಸಲು ಸಚಿವಾಲಯ ಮನವಿ ಮಾಡಿದೆ.

Leave a Reply

Your email address will not be published. Required fields are marked *