IFFI 2026: ‘ಬನಾರಸ್’ ಚಿತ್ರಕ್ಕಾಗಿ ಮತ್ತೆ ಒಂದಾದ ಭರತ್ ಬಾಲಾ, ಎ.ಆರ್. ರೆಹಮಾನ್

0
AR-Rahman

ಗೋವಾ: ಚಲನಚಿತ್ರ ನಿರ್ಮಾಪಕ ಭರತ್ ಬಾಲಾ ಮತ್ತು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ‘ಬನಾರಸ್’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ತಂದೆ-ಮಗಳ ಸಂಬಂಧದ ಕಥಾಹಂದರ ಹೊಂದಿರುವ ಈ ಚಿತ್ರ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿದೆ.

ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ, ಶಹಾನಾ ಗೋಸ್ವಾಮಿ, ನೀರಜ್ ಕಬಿ, ಛಾಯಾ ಕದಮ್, ಇಂದಿರಾ ತಿವಾರಿ ಮತ್ತು ಆಂಟೋನಿಥಾಸನ್ ಜೇಸುತಾಸನ್ ನಟಿಸಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತದ ಹಿನ್ನೆಲೆಯಲ್ಲಿರುವ ಚಿತ್ರವು ಸಂಗೀತ ಪರಂಪರೆ ಹಾಗೂ ತಲೆಮಾರುಗಳ ನಡುವಿನ ಬಾಂಧವ್ಯವನ್ನು ಅನಾವರಣಗೊಳಿಸುತ್ತದೆ.

ಬನಾರಸ್ ನಗರವನ್ನು ಗಂಗಾನದಿಯಿಂದ ಸಾವಿರಾರು ವರ್ಷಗಳಿಂದ ರೂಪುಗೊಂಡ ಅನುಭವಗಳ ನೆಲೆಯೆಂದು ಬಣ್ಣಿಸಿದ ಭರತ್ ಬಾಲಾ, ಚಿತ್ರದ ಕಥೆ ಗಂಗೆಯ ಶಾಶ್ವತ ಚೈತನ್ಯದ ಹಿನ್ನೆಲೆಯಲ್ಲಿ ಸಾಗುತ್ತದೆ ಎಂದರು.

ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ತಮ್ಮ ಸಂಯೋಜನೆಗಳಿಗೆ ನಿರಂತರ ಸ್ಫೂರ್ತಿಯಾಗಿವೆ ಎಂದು ಎ.ಆರ್. ರೆಹಮಾನ್ ಹೇಳಿದರು. ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯೂ ಸೃಜನಶೀಲತೆಗೆ ಪ್ರೇರಣೆ ನೀಡಿದೆ ಎಂದರು.

‘ಮರ್ಯನ್’ ಬಳಿಕ ಭರತ್ ಬಾಲಾ ನಿರ್ದೇಶನಕ್ಕೆ ಮರಳಿರುವ ಚಿತ್ರ ಇದಾಗಿದೆ. ಛಾಯಾಗ್ರಹಣ ನಿರ್ದೇಶಕ ಮಾರ್ಕ್ ಕೋನಿಂಕ್ಸ್ ಬೆಳಕು ಮತ್ತು ಕ್ಯಾಮೆರಾ ಚಲನೆಯ ಮೂಲಕ ಭಾವನೆಗಳನ್ನು ಕಟ್ಟಿಕೊಡುವ ಪ್ರಯತ್ನದ ಬಗ್ಗೆ ವಿವರಿಸಿದರು. ಮಹಾ ಕುಂಭದಲ್ಲಿ ಜನಸಂದಣಿಯ ನಡುವೆ ಚಿತ್ರೀಕರಣ ನಡೆಸಿದ ಅನುಭವವನ್ನು ಅಭಿಷೇಕ್ ಬ್ಯಾನರ್ಜಿ ‘ಬೀದಿ ಸಿನಿಮಾ’ ಎಂದು ಬಣ್ಣಿಸಿದರು. ‘ಬನಾರಸ್’ ಮತ್ತು ‘ರಾಮಾಯಣ’ ಚಿತ್ರಗಳಲ್ಲಿ ತಮ್ಮ ಸಂಗೀತವಿರುವುದು ಸಂತಸ ತಂದಿದೆ ಎಂದು ರೆಹಮಾನ್ ಹೇಳಿದರು.

Leave a Reply

Your email address will not be published. Required fields are marked *

You may have missed