RSS ಮುಟ್ಟಿದರೆ ಸರ್ವನಾಶ ಆಗ್ತೀರಿ.. ತಾಕತ್ತಿದ್ದರೆ ಮುಟ್ಟಿ ನೋಡಿ.. ಕಾಂಗ್ರೆಸ್ ವಿರುದ್ದ ತೊಡೆ ತಟ್ಟಿದ ಆರ್.ಅಶೋಕ್

rss

ಕಲಬುರಗಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಗೂಂಡಾ ಸಂಸ್ಕೃತಿ ತಲೆ ಎತ್ತುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುದ ಅವರು, ಬಿಜೆಪಿ ಕಾರ್ಯಕರ್ತನ ಮೇಲೆ ಕಲಬುರಗಿಯಲ್ಲಿ ವಿನಾ ಕಾರಣ ಹಲ್ಲೆ ನಡೆಸಿರುವ ಘಟನೆ ಇದಕ್ಕೆ ಸಾಕ್ಷಿ. ಉಡುಪಿಯಲ್ಲಿ ಇಬ್ಬರು ಭಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಲಾಗಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 23 ಹಿಂದೂಗಳ ಹತ್ಯೆ ಮಾಡಲಾಯಿತು. ಎಲ್ಲೆಡೆ ಹಿಂದೂಗಳನ್ನು ಗುರಿಯಾಗಿಸಿ ಹಲ್ಲೆ, ಹತ್ಯೆ ಯತ್ನಗಳು ಹೆಚ್ಚುತ್ತಿವೆ. ಇದು ಗೂಂಡಾ ರಾಜ್ಯವಾಗಿ ಪರಿವರ್ತನೆ ಆಗಿದೆ ಎಂದು ದೂರಿದರು.

RSS ಸಂಘಟನೆಯನ್ನು ಮುಟ್ಟಿದ್ರೆ ಕಾಂಗ್ರೆಸ್ ಸರ್ವನಾಶ ಆಗುತ್ತೆ ಎಂದು ಅಶೋಕ್ ಎಚ್ಚರಿಕೆ ನೀಡಿದರು. ಸರ್ಕಾರದ ಇಲಾಖೆಗಳು ಬಿಜೆಪಿ ಅವಧಿಯಲ್ಲಿ RSS ಶಾಖೆಗಳಾಗಿದ್ದವು, ಈಗ ಅವುಗಳನ್ನು ಕ್ಲೀನ್ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಬಗ್ಗೆ ಕಿಡಿ ಕಾರಿದ ಅಶೋಕ್, ಧಮ್ಮು ತಾಕತ್ತು ಇದ್ದರೆ ಮುಟ್ಟಿ ನೋಡಲಿ. ಅಂತಹ ಇಂದಿರಾಗಾಂಧಿ ಅವರ ಕೈನಲ್ಲಿ ಏನು ಮಾಡಲು ಆಗಲಿಲ್ಲ. ನಿರ್ಬಂಧ ಹೇರಿ ಹಿಂದೆ ಪಡೆದರು. RSS ವಿಷಯಕ್ಕೆ ಬಂದವರೆಲ್ಲಾ ಸರ್ವನಾಶ ಆಗಿದ್ದಾರೆ. ಇವರಿಗೂ ಅದೇ ಗತಿ ಕಾದಿದೆ ಎಂದರು.

ಅಪ್ರತಿಮ ದೇಶಪ್ರೇಮಿ ಸಾವರ್ಕರ್ ಭಾವಚಿತ್ರ ತೆಗೆದು ಹಾಕಿರುವುದು ಸರಿಯಲ್ಲ. ಅವರು ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದರು ಎಂಬುದೇ ಕಾಂಗ್ರೆಸ್ಸಿಗರ ಹೊಟ್ಟೆಕಿಚ್ಚಿಗೆ ಕಾರಣ. ಬೇಕಿದ್ದರೆ ಮತ್ತೊಂದು ನೆಹರು ಭಾವಚಿತ್ರ ಹಾಕಿಕೊಳ್ಳಲಿ, ಸಾವರ್ಕರ್ ಚಿತ್ರ ತೆಗೆಯಬಾರದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನಿಂದಲೂ ಹಿಂದೂಗಳನ್ನು ವಿರೋಧಿಸಿ ಕೊಂಡೇ ಬಂದಿದ್ದಾರೆ. ದಸರಾ ಕುಸ್ತಿ ವೇಳೆ ಕೇಸರಿ ಪೇಠ ಕಿತ್ತಸೆದರು. ಈಗ ಅವರ ಸಂಪುಟ ಸಹೋದ್ಯೋಗಿ ಜಮೀರ್ ಸ್ಪೀಕರ್ ಪೀಠಕ್ಕೆ ಧರ್ಮವನ್ನು ತಂದು ನೀಚ ರಾಜಕಾರಣ ಮಾಡುತ್ತಿದ್ದಾರೆ. ಇವೆಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಾರೆ. ನಮ್ಮ ಪಕ್ಷ ವಿಧಾನಮಂಡಲದ ಒಳಗೆ ಮತ್ತು ಹೊರಗೆ ಈ ಎಲ್ಲಾ ವಿಷಯಗಳ ವಿರುದ್ಧ ಹೋರಾಟ ನಡೆಸಲಿದೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದರು.

You may have missed