IAS ರಾಜೀನಾಮೆ ಸರಣಿ; 13 ವರ್ಷಗಳ ಸೇವೆಗೆ ದಿವ್ಯಾ ಮಿತ್ತಲ್ ವಿದಾಯ

0
Divya-Mittal-IAS

ಲಕ್ನೋ: ಉತ್ತರ ಪ್ರದೇಶದ 2013ರ ಬ್ಯಾಚ್‌ನ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು 13 ವರ್ಷಗಳ ಸಾರ್ವಜನಿಕ ಸೇವೆಗೆ ವಿದಾಯ ಹೇಳಿದ್ದಾರೆ. ಪ್ರಸ್ತುತ ಕಂದಾಯ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ರಾಜೀನಾಮೆ ನೀಡಿರುವುದಾಗಿ ಭಾನುವಾರ ‘ಎಕ್ಸ್‌’ನಲ್ಲಿ ಘೋಷಿಸಿದ್ದಾರೆ.

ಐಐಟಿ ದೆಹಲಿ ಮತ್ತು ಐಐಎಂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದ ಬಳಿಕ ಲಂಡನ್‌ನಲ್ಲಿ ಉದ್ಯೋಗ ಪಡೆದಿದ್ದ ಮಿತ್ತಲ್, ದೇಶದಿಂದ ದೂರವಿರುವುದು ಮನಸ್ಸಿಗೆ ಭಾರವಾಗಿದ್ದರಿಂದ ಭಾರತಕ್ಕೆ ಮರಳಿ ಐಎಎಸ್ ಸೇವೆಗೆ ಸೇರಿದ್ದಾಗಿ ತಿಳಿಸಿದ್ದಾರೆ.

ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡ ಅವರು, ಡಿಯೋರಿಯಾ ಸರಿಯಾದದ್ದಕ್ಕಾಗಿ ನಿಲ್ಲುವುದು ಜವಾಬ್ದಾರಿ ಎಂಬುದನ್ನು ಕಲಿಸಿದರೆ, ಮಿರ್ಜಾಪುರ ‘ಅಸಾಧ್ಯ’ ಎಂಬುದು ವಾಸ್ತವವಲ್ಲ, ಕೇವಲ ಒಂದು ಅಭಿಪ್ರಾಯ ಎಂಬುದನ್ನು ಕಲಿಸಿತು ಎಂದು ಹೇಳಿದ್ದಾರೆ.

‘ಜನರ ನಂಬಿಕೆಯೇ ನಿಜವಾದ ಶಕ್ತಿ’

ಸಾರ್ವಜನಿಕ ಸೇವೆಯ ನಿಜವಾದ ತೃಪ್ತಿ ಭೂಹಕ್ಕು ಪಡೆದ ಕುಟುಂಬಗಳು, ಘನತೆಯಿಂದ ಬದುಕಲು ಅವಕಾಶ ಪಡೆದ ಅಂಗವಿಕಲರು ಹಾಗೂ ಹೊಲಗಳಿಗೆ ನೀರು ತಲುಪಿದ ರೈತರ ಮುಖದಲ್ಲಿ ಕಂಡಿದ್ದಾಗಿ ಮಿತ್ತಲ್ ಹೇಳಿದ್ದಾರೆ.

‘ಪ್ರತಿಯೊಂದು ಸರ್ಕಾರಿ ಕಡತದ ಹಿಂದೆ ಒಬ್ಬ ವ್ಯಕ್ತಿ ಇರುತ್ತಾನೆ. ಅವರ ಘನತೆಯನ್ನು ಎತ್ತಿಹಿಡಿಯುವುದೇ ನಿಜವಾದ ನ್ಯಾಯ’ ಎಂದು ಅವರು ಹೇಳಿದ್ದಾರೆ.

ಲಹುರಿಯಾ ದಹ್ ಬೆಟ್ಟದ ಗ್ರಾಮಕ್ಕೆ ಮೊದಲ ಬಾರಿಗೆ ನೀರು ತಲುಪಿದಾಗ ವೃದ್ಧೆಯೊಬ್ಬರು ನೀಡಿದ ಆಶೀರ್ವಾದವನ್ನು ಮರೆಯಲಾಗದ ಕ್ಷಣ ಎಂದು ಸ್ಮರಿಸಿದ್ದಾರೆ.

‘ಹುದ್ದೆ ತೊರೆದರೂ ದೇಶಕ್ಕಾಗಿ ಕಂಡ ಕನಸು ಬದಲಾಗುವುದಿಲ್ಲ’ ಎಂದು ಮಿತ್ತಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *