ಕುಲ್ಲು (ಹಿಮಾಚಲ ಪ್ರದೇಶ):ರಾಜ್ಯದ ಕುಲ್ಲು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಮೇಘಸ್ಫೋಟದ ಪರಿಣಾಮ ಭಾರೀ ಮಳೆ, ಪ್ರವಾಹ ಉಂಟಾಗಿ ಎರಡೂ ಸಾವು ಸಂಭವಿಸಿದ್ದು, ಕನಿಷ್ಠ 23 ಜನರು ನಾಪತ್ತೆಯಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಸೈನ್ಜ್ ತಾಲೂಕಿನ ಜೀವಾ ನಲ್ಲಾ, ರೆಹ್ಲಾ ಬಿಹಾಲ್ ಹಾಗೂ ಗಡ್ಸಾ ಪ್ರದೇಶದ ಶಿಲಾಗಢ ಎಂಬಲ್ಲಿ ಮೇಘಸ್ಫೋಟ ಸಂಭವಿಸಿದೆ. ಪರಿಣಾಮವಾಗಿ ನದಿಗಳು ಉಕ್ಕಿ ಹರಿದು, ಹತ್ತಾರು ಮನೆಗಳು, ಕಟ್ಟಡಗಳು, ರಸ್ತೆ ಹಾಗೂ ಸೇತುವೆಗಳಿಗೆ ಬಹುಮಟ್ಟಿಗೆ ಹಾನಿಯಾಗಿದೆ.

ಇಂದಿರಾ ಪ್ರಿಯದರ್ಶಿನಿ ಜಲವಿದ್ಯುತ್ ಯೋಜನೆ ಬಳಿ ಇರುವ ಕಾರ್ಮಿಕ ಕಾಲೋನಿಯಲ್ಲಿ ನೆಲೆಸಿದ್ದ 15ಕ್ಕೂ ಹೆಚ್ಚು ಕಾರ್ಮಿಕರು ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಸಾಧ್ಯತೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಸ್ಥಳೀಯ ಆಡಳಿತ ಹತ್ತಿರದ ಗ್ರಾಮಸ್ಥರಿಗೆ ಎಚ್ಚರಿಕೆಯನ್ನು ನೀಡಿದ್ದು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದೆ. ಭೂಕುಸಿತ ಘಟನೆಗಳು ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ಕೂಡ ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸೇರಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಹವಾಮಾನ ಇಲಾಖೆ ಮುಂದಿನ 24 ಗಂಟೆಗಳ ಕಾಲ ಇನ್ನೂ ಭಾರೀ ಮಳೆ ಸಾಧ್ಯತೆ ಇರುವ ಎಚ್ಚರಿಕೆಯನ್ನು ನೀಡಿದೆ.

Leave a Reply

Your email address will not be published. Required fields are marked *