ಜಿಎಸ್ಟಿ ಸುಧಾರಣೆಗಳಿಂದ ಉದ್ಯಮಗಳಲ್ಲಿ ವಿಶ್ವಾಸ ವೃದ್ಧಿ: ಕುಮಾರಸ್ವಾಮಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆಡಳಿತವನ್ನು ಸರಳ, ನ್ಯಾಯಸಮ್ಮತ ಹಾಗೂ ಉದ್ಯಮಸ್ನೇಹಿಯನ್ನಾಗಿ ಮಾಡುವ ಉದ್ದೇಶದೊಂದಿಗೆ ಪ್ರಸ್ತಾಪಿಸಿರುವ ಸುಧಾರಣೆಗಳು ವ್ಯವಹಾರಗಳಲ್ಲಿ ವಿಶ್ವಾಸ ಹೆಚ್ಚಿಸಲಿವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
57ನೇ ಜಿಎಸ್ಟಿ ಮಂಡಳಿ ಸಭೆಯ ಶಿಫಾರಸುಗಳನ್ನು ಸ್ವಾಗತಿಸಿರುವ ಅವರು, ತೆರಿಗೆ ಅನುಸರಣೆ ಪ್ರಕ್ರಿಯೆಯಲ್ಲಿನ ಹೊರೆ ಕಡಿಮೆ ಮಾಡುವುದರ ಜತೆಗೆ ತೆರಿಗೆದಾರರಿಗೆ ಹೆಚ್ಚಿನ ಸ್ಪಷ್ಟತೆ ಮತ್ತು ಖಚಿತತೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮಗಳು ಮಹತ್ವದ ಹೆಜ್ಜೆಯಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಕುಮಾರಸ್ವಾಮಿ, ಜಿಎಸ್ಟಿ ಪ್ರಕ್ರಿಯೆಗಳನ್ನು ಸರಳೀಕರಿಸುವುದು ಹಾಗೂ ನಿಯಮಗಳಲ್ಲಿ ಏಕರೂಪತೆ ತರುವುದು ಉದ್ಯಮಗಳ ಕಾರ್ಯನಿರ್ವಹಣೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಶಿಫಾರಸುಗಳಲ್ಲಿ ಬಂಧನಕ್ಕೆ ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ತೆಗೆದುಹಾಕುವುದು, ಪ್ರಾಸಿಕ್ಯೂಷನ್ಗೆ ಸಂಬಂಧಿಸಿದ ತೆರಿಗೆ ಮೊತ್ತದ ಮಿತಿಯನ್ನು ₹1 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸುವುದು, ದಂಡದ ಪ್ರಮಾಣ ಕಡಿಮೆ ಮಾಡುವುದು ಹಾಗೂ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಮತ್ತು ಮರುಪಾವತಿ ಸೌಲಭ್ಯಗಳ ಲಭ್ಯತೆಯನ್ನು ವಿಸ್ತರಿಸುವ ಕ್ರಮಗಳು ಸೇರಿವೆ ಎಂದು ಅವರು ಹೇಳಿದ್ದಾರೆ.

ಈ ಸುಧಾರಣೆಗಳು ವ್ಯವಹಾರ ನಡೆಸುವ ಸುಲಭತೆಯನ್ನು ಹೆಚ್ಚಿಸುವುದರ ಜತೆಗೆ ತೆರಿಗೆ ಆಡಳಿತದ ಮೇಲಿನ ವಿಶ್ವಾಸವನ್ನು ಬಲಪಡಿಸಲಿವೆ ಎಂಬ ನಿರೀಕ್ಷೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ.
ತೆರಿಗೆದಾರರ ಅನುಕೂಲತೆ ಮತ್ತು ನಿಯಮಗಳ ಪರಿಣಾಮಕಾರಿ ಜಾರಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ಕುಮಾರಸ್ವಾಮಿ ಒತ್ತಿಹೇಳಿದ್ದಾರೆ. ಗುಪ್ತಚರ ಆಧಾರಿತ ಕ್ರಮಗಳ ಮೂಲಕ ನೈಜ ಉದ್ಯಮಗಳಿಗೆ ಅನಗತ್ಯ ತೊಂದರೆ ನೀಡದೆ, ಉದ್ದೇಶಪೂರ್ವಕ ತೆರಿಗೆ ವಂಚನೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ತೆರಿಗೆ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಉದ್ಯಮಗಳಿಗೆ ಹೆಚ್ಚು ನಿರೀಕ್ಷಿಸಬಹುದಾದ ಮತ್ತು ಸ್ಥಿರವಾದ ತೆರಿಗೆ ವಾತಾವರಣ ಕಲ್ಪಿಸುವುದು ಈ ಸುಧಾರಣೆಗಳ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
