ಪೊಳಲಿ ಕ್ಷೇತ್ರದಲ್ಲಿ ₹1.50 ಕೋಟಿ ವೆಚ್ಚದ ಗೋಶಾಲೆ ನಿರ್ಮಾಣಕ್ಕೆ ಸಿದ್ಧತೆ-ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ .

0
Polali-Goshala-Rajesh-Naik

ಮಂಗಳೂರು: ಕರಾವಳಿ ಕರ್ನಾಟಕದ ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವತಿಯಿಂದ ಫಲ್ಗುಣಿ ನದಿ ತಟದ ‘ಪಡ್ಯಾಪು’ ಬಳಿ 15 ಎಕರೆ ಪ್ರದೇಶದಲ್ಲಿ ₹1.50 ಕೋಟಿ ವೆಚ್ಚದಲ್ಲಿ ಗೋಶಾಲೆ ನಿರ್ಮಾಣಗೊಳ್ಳಲಿದ್ದು, ಕಾಮಗಾರಿಯ ಭೂಮಿಪೂಜೆಯನ್ನು ಶೀಘ್ರದಲ್ಲೇ ನೆರವೇರಿಸಲು ಸಿದ್ಧತೆ ನಡೆದಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಗೋಶಾಲೆಯ ಕಾಮಗಾರಿಯ ನೀಲನಕ್ಷೆಯನ್ನು ಪರಿಶೀಲಿಸಿ, ನಿರ್ಮಾಣ ಕಾರ್ಯದ ಮುಂದಿನ ಹಂತಗಳ ಕುರಿತು ಚರ್ಚಿಸಲಾಯಿತು.

ಯೋಜನೆಯಡಿ ಗೋಶಾಲೆಯ ಜೊತೆಗೆ ಸ್ನಾನಘಟ್ಟ, ಗೋಶಾಲೆಯ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಹಾಗೂ ಗೋದಾಮು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಪ್ಪಂದವೂ ಮುಗಿದಿದೆ. ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಲಾಗಿದೆ.

ಸಭೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಚಂದ್ರಮೋಹನ್, ಇಂಜಿನಿಯರ್ ಲಕ್ಷ್ಮಣ್ ಪೂಜಾರಿ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

ಮಿಶ್ರತಳಿ ಕರು ಪ್ರದರ್ಶನ

ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲಾ ಪಶುಸಂಗೋಪನಾ ಇಲಾಖೆಯ ವತಿಯಿಂದ ಪೊಳಲಿಯಲ್ಲಿ ಆಯೋಜಿಸಲಾದ ಮಿಶ್ರತಳಿ ಕರು ಪ್ರದರ್ಶನದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಉದ್ಘಾಟಿಸಿದರು.

ಪಶುಸಂಗೋಪನೆ ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರೈತಾಪಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರದರ್ಶನವನ್ನು ವೀಕ್ಷಿಸಿದರು.

Leave a Reply

Your email address will not be published. Required fields are marked *