ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಬಂಧನ

0
KODIHALLI-CHANDRASHEKAR-216x300-1

ಹುಬ್ಬಳ್ಳಿ: 2013ರಲ್ಲಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈಲು ತಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸೋಮವಾರ ಬೆಳಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ರೈತ ಸಂಘದ ವತಿಯಿಂದ ಬೆಳಗ್ಗೆ 10 ಗಂಟೆಗೆ ಶಿರಸಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಹಾಗೂ ಬಳಿಕ 11.30ಕ್ಕೆ ದಾಸನಕೊಪ್ಪದಲ್ಲಿ ರೈತರ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಶಿರಸಿಗೆ ಆಗಮಿಸಿದ್ದರು.

ಈ ವೇಳೆ 2013ರಲ್ಲಿ ನಡೆದ ರೈಲು ತಡೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ವಾರಂಟ್ ಆಧಾರದ ಮೇಲೆ ಹುಬ್ಬಳ್ಳಿ ರೈಲ್ವೆ ಪೊಲೀಸರು, ಶಿರಸಿ ಪೊಲೀಸರ ಸಹಕಾರದೊಂದಿಗೆ ಅವರನ್ನು ಬಂಧಿಸಿದ್ದಾರೆ.

ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ 2013ರಲ್ಲಿ ರೈತರು ಸುಮಾರು ಆರು ಗಂಟೆಗಳ ಕಾಲ ರೈಲು ಸಂಚಾರಕ್ಕೆ ತಡೆ ಒಡ್ಡಿ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಾರಂಟ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬಂಧನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನದ ಬಳಿಕ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹುಬ್ಬಳ್ಳಿಗೆ ಕರೆದೊಯ್ದು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

Leave a Reply

Your email address will not be published. Required fields are marked *

You may have missed