EPFOದಿಂದ ಪಿಎಫ್ ಹಣ ಕಂತುಗಳಲ್ಲಿ ಹಿಂಪಡೆಯಲು ಅವಕಾಶ: ಅಂತಿಮ ಇತ್ಯರ್ಥದ ಕಾಯುವಿಕೆ 2 ತಿಂಗಳಿಗೆ ಇಳಿಕೆ

0
EPFO-1-1

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಿವೃತ್ತರಾಗುವ ಸದಸ್ಯರಿಗೆ ಪಿಎಫ್ ಉಳಿತಾಯವನ್ನು ಕಂತುಗಳಲ್ಲಿ ಹಿಂಪಡೆಯಲು ಅವಕಾಶ ಕಲ್ಪಿಸುವ ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆಗೆ (SWP) ಅನುಮೋದನೆ ನೀಡಿದೆ.

ಗುರುವಾರ ನವದೆಹಲಿಯಲ್ಲಿ ನಡೆದ ಕೇಂದ್ರ ಟ್ರಸ್ಟಿಗಳ ಮಂಡಳಿಯ 240ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅಧ್ಯಕ್ಷತೆ ವಹಿಸಿದ್ದರು.

ಯೋಜನೆಯಡಿ ಸದಸ್ಯರು ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಕಂತುಗಳಲ್ಲಿ ಹಣ ಪಡೆಯಬಹುದು. ಖಾತೆಯಲ್ಲಿ ಉಳಿದ ಮೊತ್ತದ ಮೇಲೆ ಬಡ್ಡಿ ಮುಂದುವರಿಯಲಿದೆ. ಆರಂಭದಲ್ಲಿ 55 ವರ್ಷ ಮೇಲ್ಪಟ್ಟ ಮತ್ತು ₹5 ಲಕ್ಷಕ್ಕಿಂತ ಹೆಚ್ಚು ಉಳಿತಾಯ ಹೊಂದಿರುವ ಸುಮಾರು 6.32 ಲಕ್ಷ ಸದಸ್ಯರಿಗೆ ಇದರ ಪ್ರಯೋಜನ ಸಿಗುವ ನಿರೀಕ್ಷೆಯಿದೆ.

ಇದೇ ವೇಳೆ, ಕನಿಷ್ಠ ಪಿಎಫ್ ಬ್ಯಾಲೆನ್ಸ್ ಮಿತಿಯನ್ನು ಶೇ.25ರಿಂದ ಶೇ.10ಕ್ಕೆ ಇಳಿಸಲಾಗಿದ್ದು, ಅಂತಿಮ ಹಣ ಹಿಂಪಡೆಯಲು ಕಾಯಬೇಕಾದ ಅವಧಿಯನ್ನು 12 ತಿಂಗಳಿಂದ 2 ತಿಂಗಳಿಗೆ ಕಡಿತಗೊಳಿಸಲಾಗಿದೆ.

EDLI ಯೋಜನೆಗೆ ತಿದ್ದುಪಡಿ, ಅರ್ಹ AIFಗಳಲ್ಲಿ ಹೊಸ ಹೂಡಿಕೆಯ ಶೇ.3ರಷ್ಟು ಹೂಡಿಕೆಗೆ ತಾತ್ವಿಕ ಅನುಮೋದನೆ ಸೇರಿದಂತೆ ಹಲವು ನಿರ್ಧಾರಗಳನ್ನು ಮಂಡಳಿ ಕೈಗೊಂಡಿದೆ.

CITES 2.0 ವ್ಯವಸ್ಥೆಯಿಂದ ಕ್ಲೈಮ್ ಇತ್ಯರ್ಥದ ಸರಾಸರಿ ಅವಧಿ 11.15 ದಿನಗಳಿಂದ 2.57 ದಿನಗಳಿಗೆ ಇಳಿದಿದ್ದು, ಅರ್ಜಿ ತಿರಸ್ಕೃತ ಪ್ರಮಾಣ ಶೇ.23ರಿಂದ ಶೇ.7.82ಕ್ಕೆ ಕಡಿಮೆಯಾಗಿದೆ ಎಂದು ಸಭೆಗೆ ತಿಳಿಸಲಾಯಿತು.

Leave a Reply

Your email address will not be published. Required fields are marked *