ಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರ

0
Dr-Mamatha-B-acting-VC-of-Maharani-Cluster-University-2026

ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ನೂತನ ಪ್ರಭಾರ ಕುಲಪತಿಯಾಗಿ ವಿ.ಎಚ್.ಡಿ. ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ನಿರ್ದೇಶಕಿ ಡಾ. ಮಮತಾ ಬಿ. ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.

ಈವರೆಗೆ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಅಶೋಕ ಎಸ್.ಬಿ. ಅವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಡಾ. ಮಮತಾ ಬಿ. ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಹೋಮ್ ಸೈನ್ಸ್‌ನ ಫ್ಯಾಮಿಲಿ ರಿಸೋರ್ಸ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪರಿಣತಿ ಹೊಂದಿರುವ ಡಾ. ಮಮತಾ ಬಿ. ಅವರಿಗೆ 29 ವರ್ಷಗಳ ಬೋಧನಾ ಅನುಭವವಿದೆ. 25ಕ್ಕೂ ಅಧಿಕ ಸಂಶೋಧನಾ ಪ್ರಕಟಣೆಗಳನ್ನು ಹೊರತಂದಿರುವ ಅವರು, 20ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸಂಪಾದಿತ ಪುಸ್ತಕಗಳಲ್ಲಿ ಐದು ಅಧ್ಯಾಯಗಳನ್ನು ರಚಿಸಿದ್ದು, ನಾಲ್ವರು ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ವಿಶ್ವವಿದ್ಯಾಲಯದ ಹೋಮ್ ಸೈನ್ಸ್ ಪದವಿ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷೆಯಾಗಿ ಅವರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಯುಜಿಸಿ ಪ್ರಾಯೋಜಿತ ಮೈನರ್ ಸಂಶೋಧನಾ ಯೋಜನೆಯೊಂದನ್ನೂ ಪೂರ್ಣಗೊಳಿಸಿದ್ದಾರೆ.

ಬೆಂಗಳೂರು ನಗರ, ಮೈಸೂರು, ಮಂಗಳೂರು, ನಿಟ್ಟೆ ಹಾಗೂ ಮೌಂಟ್ ಕಾರ್ಮೆಲ್ ಸೇರಿದಂತೆ ವಿವಿಧ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಮತ್ತು ಬೋರ್ಡ್ ಆಫ್ ಸ್ಟಡೀಸ್ಗಳಲ್ಲಿ ಅಧ್ಯಕ್ಷೆ ಹಾಗೂ ಸದಸ್ಯೆಯಾಗಿ ಡಾ. ಮಮತಾ ಬಿ. ಸೇವೆ ಸಲ್ಲಿಸಿದ್ದಾರೆ.

ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ನಿಕಟಪೂರ್ವ ಕುಲಪತಿ ಡಾ. ಅಶೋಕ ಎಸ್.ಬಿ., ಮೌಲ್ಯಮಾಪನ ಕುಲಸಚಿವ ಪ್ರೊ. ವೈ. ರಮೇಶ್, ಆಡಳಿತ ಕುಲಸಚಿವೆ ಸೀಮಾ ಬಿ. ನಾಯಕ್, ಪ್ರೊ. ಆರ್.ಕೆ. ವಾಣಿಶ್ರೀ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *