ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಚಾಲನೆ: ನ.10ರವರೆಗೆ ಜಾತ್ರಾ ಮಹೋತ್ಸವ, ಕಾಲ್ನಡಿಗೆಯಲ್ಲಿ ಹರಿದು ಬಂದ ಭಕ್ತಸಾಗರ

ವರದಿ: ಮಹದೇವಸ್ವಾಮಿ ಜಿ ಗೌಡ
ಚಾಮರಾಜನಗರ: ಪುರಾಣ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ನವೆಂಬರ್ 6ರಿಂದ 10ರವರೆಗೆ ನಡೆಯಲಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಮೊದಲ ದಿನವೇ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸಿದ್ದು, ಕಾಲ್ನಡಿಗೆಯಲ್ಲಿ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಕಳೆದ ನಾಲ್ಕೈದು ದಿನಗಳಿಂದಲೇ ಕಾಲ್ನಡಿಗೆಯಲ್ಲಿ ಬೆಟ್ಟದತ್ತ ಪ್ರಯಾಣಿಸುತ್ತಿದ್ದಾರೆ. ‘ಉಘೇ ಮಾದಪ್ಪ’ ಘೋಷಣೆ, ತಮಟೆ ಮತ್ತು ಕಂಸಾಳೆ ನಾದದೊಂದಿಗೆ ತಂಡೋಪತಂಡವಾಗಿ ಸಾಗುತ್ತಿರುವ ಭಕ್ತರು ದಾರಿಯಲ್ಲೇ ಅಡುಗೆ ಮಾಡಿ ಊಟ, ವಿಶ್ರಾಂತಿ ಪಡೆದು ಮತ್ತೆ ಪ್ರಯಾಣ ಮುಂದುವರಿಸುತ್ತಿದ್ದಾರೆ.
ಕಾಲ್ನಡಿಗೆ ಭಕ್ತರಿಗೆ ಸುರಕ್ಷತಾ ನಿಯಮ
ಹಿಂದಿನ ಜಾತ್ರೆಯಲ್ಲಿ ಕಾಲ್ನಡಿಗೆ ಭಕ್ತರ ಮೇಲೆ ಚಿರತೆ ದಾಳಿ ನಡೆದ ಹಿನ್ನೆಲೆಯಲ್ಲಿ ಈ ಬಾರಿ ಅರಣ್ಯ ಇಲಾಖೆ ಮತ್ತು ಪ್ರಾಧಿಕಾರ ವಿಶೇಷ ಮುನ್ನೆಚ್ಚರಿಕೆ ವಹಿಸಿವೆ. ಬೆಳಿಗ್ಗೆ 7ರಿಂದ ಸಂಜೆ 4ರವರೆಗೆ ಮಾತ್ರ ಕಾಲ್ನಡಿಗೆಗೆ ಅವಕಾಶ ನೀಡಲಾಗಿದೆ. ಸಂಜೆ 4ರ ನಂತರ ತಾಳಬೆಟ್ಟದಿಂದ ಬೆಟ್ಟದತ್ತ ನಡೆಯುವುದನ್ನು ನಿಷೇಧಿಸಲಾಗಿದೆ. ತಡವಾದವರು ಅಲ್ಲಿಯೇ ಉಳಿದು ಮರುದಿನ ಬೆಳಿಗ್ಗೆ ಪ್ರಯಾಣ ಮುಂದುವರಿಸಬೇಕು ಎಂದು ಸೂಚಿಸಲಾಗಿದೆ.
ತಾಳಬೆಟ್ಟ ಮತ್ತು ರಂಗಸ್ವಾಮಿ ಒಡ್ಡಿನಲ್ಲಿ ಅರಣ್ಯ ಸಿಬ್ಬಂದಿಯ ಎಂಟು ತಂಡಗಳನ್ನು ನಿಯೋಜಿಸಲಾಗಿದೆ. ಗುಂಪಿನಲ್ಲಿ ನಡೆಯುವುದು, ಕಾಡಿನೊಳಗೆ ಪ್ರವೇಶಿಸದಿರುವುದು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಎಸೆಯದಿರುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ನಾಲ್ಕು ಲಕ್ಷ ಲಾಡು, 350 ಬಸ್‌ಗಳ ವ್ಯವಸ್ಥೆ
ಲಕ್ಷಾಂತರ ಭಕ್ತರಿಗಾಗಿ ನಾಲ್ಕು ಲಕ್ಷ ಲಾಡುಗಳನ್ನು ಸಿದ್ಧಪಡಿಸಲಾಗಿದೆ. ಗರ್ಭಿಣಿಯರು, ವಿಕಲಚೇತನರು ಮತ್ತು ತಾಯಂದಿರಿಗೆ ಗೇಟ್ ನಂ.4ರಲ್ಲಿ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್ ತಿಳಿಸಿದ್ದಾರೆ.
ಭಕ್ತರ ಸಂಚಾರಕ್ಕೆ 350 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಬಸ್‌ಗಳಲ್ಲಿ ತಾಂತ್ರಿಕ ತೊಂದರೆ ಉಂಟಾದರೆ ನೆರವಾಗಲು ಹನೂರು, ಕೊಳ್ಳೇಗಾಲ ಮತ್ತು ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ತಿಳಿಸಿದ್ದಾರೆ.

ಜಾತ್ರೆಯ ಹಿನ್ನೆಲೆಯಲ್ಲಿ ನವೆಂಬರ್ 10ರ ಸಂಜೆ 6ರವರೆಗೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಬರುವವರಿಗೆ ಕೌದಳ್ಳಿಯಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಅಲ್ಲಿಂದ ಬೆಟ್ಟಕ್ಕೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ನವೆಂಬರ್ 10ರಂದು ಬೆಳಿಗ್ಗೆ 7.30ರಿಂದ 8.40ರವರೆಗೆ ಮಹಾರಥೋತ್ಸವ ನಡೆಯಲಿದೆ. ಭಕ್ತರು ಸುರಕ್ಷತಾ ನಿಯಮಗಳನ್ನು ಪಾಲಿಸಿ ದೇವರ ದರ್ಶನ ಪಡೆಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
