ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್: ಪಡಿತರ ಪ್ರಯೋಜನಗಳು ಈಗ ಭಾರತದಾದ್ಯಂತ ಪೋರ್ಟಬಲ್

0
One-Nation-One-Ration-card

ನವದೆಹಲಿ: ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ (ONORC) ಯೋಜನೆಯಡಿ 2019ರಿಂದ ಈವರೆಗೆ ದೇಶಾದ್ಯಂತ 233 ಕೋಟಿಗೂ ಹೆಚ್ಚು ಪಡಿತರ ವಹಿವಾಟುಗಳು ನಡೆದಿದ್ದು, 614 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಆಹಾರ ಧಾನ್ಯ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೋಂದಾಯಿತ ಫಲಾನುಭವಿಗಳು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಸಬ್ಸಿಡಿ ದರದಲ್ಲಿ ಪಡಿತರ ಪಡೆಯಲು ಈ ಯೋಜನೆ ಅವಕಾಶ ಕಲ್ಪಿಸಿದೆ. ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಇದರಿಂದ ಅನುಕೂಲವಾಗಿದೆ.

ದೇಶದ ಎಲ್ಲ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆ ಜಾರಿಯಲ್ಲಿದ್ದು, ಪ್ರತಿ ತಿಂಗಳು ಸರಾಸರಿ 3.27 ಕೋಟಿ ವಹಿವಾಟುಗಳು ನಡೆಯುತ್ತಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಎಲ್ಲ ಫಲಾನುಭವಿಗಳಿಗೂ ಇದರ ಸೌಲಭ್ಯ ಲಭ್ಯವಿದೆ.

ಅಕ್ಟೋಬರ್ 2026ರ ವೇಳೆಗೆ ಸುಮಾರು 78.65 ಕೋಟಿ ಫಲಾನುಭವಿಗಳ ಪಡಿತರ ದತ್ತಾಂಶವನ್ನು ಡಿಜಿಟಲೀಕರಣಗೊಳಿಸಲಾಗಿದೆ. ಒಟ್ಟು 20.51 ಕೋಟಿ ಪಡಿತರ ಚೀಟಿಗಳ ಪೈಕಿ 98.8ರಷ್ಟು ಚೀಟಿಗಳು ಆಧಾರ್‌ಗೆ ಜೋಡಣೆಯಾಗಿವೆ. 71.52 ಕೋಟಿ ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ದೇಶದ ಶೇ.99.8ರಷ್ಟು ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಿಒಎಸ್ ಯಂತ್ರಗಳನ್ನು ಅಳವಡಿಸಲಾಗಿದೆ. ನಕಲಿ ಮತ್ತು ಅನರ್ಹ ದಾಖಲೆಗಳನ್ನು ಪರಿಶೀಲಿಸಿ 2.58 ಕೋಟಿ ನಮೂದುಗಳನ್ನು ತೆಗೆದುಹಾಕಲಾಗಿದೆ.

ಇದಲ್ಲದೆ, 13 ಭಾಷೆಗಳಲ್ಲಿ ‘ಮೇರಾ ರೇಷನ್’ ಮೊಬೈಲ್ ಆ್ಯಪ್ ಲಭ್ಯವಿದ್ದು, ಪಡಿತರ ಅರ್ಹತೆ, ವಹಿವಾಟಿನ ಮಾಹಿತಿ ಹಾಗೂ ಹತ್ತಿರದ ನ್ಯಾಯಬೆಲೆ ಅಂಗಡಿಗಳ ವಿವರಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

Leave a Reply

Your email address will not be published. Required fields are marked *