ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲಗೊಂಡಿದೆ: ರಾಹುಲ್ ಗಾಂಧಿ ಆರೋಪ

ಹೈದರಾಬಾದ್: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದ್ದು, ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಭಾರತ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಸ್ವಾಗತಿಸಿದರು. ಸರ್ಕಾರದ ನಿರ್ಬಂಧಗಳಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಜಾಗತಿಕ ಅತಿಥಿಗಳ ಪರವಾಗಿ ಕ್ಷಮೆಯಾಚಿಸಿದರು.
ಜಗತ್ತು ಎರಡು ಗುಂಪುಗಳಾಗಿ ವಿಭಜನೆಯಾಗಿದೆ. ಎಲ್ಲವೂ ತಮಗೆ ತಿಳಿದಿದೆ ಎಂದು ಭಾವಿಸುವ ಅಹಂಕಾರಿ ಅಲ್ಪಸಂಖ್ಯಾತರು ಒಂದು ಗುಂಪಾದರೆ, ಪ್ರಶ್ನೆಗಳನ್ನು ಕೇಳುವ ಮತ್ತು ಇತರರ ಮಾತುಗಳನ್ನು ಆಲಿಸುವ ಬಹುಸಂಖ್ಯಾತರು ಮತ್ತೊಂದು ಗುಂಪು ಎಂದು ಅಭಿಪ್ರಾಯಪಟ್ಟರು. 2014ರ ಚುನಾವಣೆಯ ಬಳಿಕ ಭಾರತದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. ರಾಜಕೀಯ ಮತ್ತು ಉದ್ಯಮಗಳ ನಡುವೆ ಅನಾರೋಗ್ಯಕರ ಹೊಂದಾಣಿಕೆ ಬೆಳೆದಿದೆ ಎಂದು ಆರೋಪಿಸಿದರು.

2024ರ ಚುನಾವಣೆಯ ಪಾರದರ್ಶಕತೆಯನ್ನೂ ಪ್ರಶ್ನಿಸಿದ ಅವರು, 14 ಕೋಟಿ ಮತದಾರರನ್ನು ಅಸ್ತಿತ್ವದಲ್ಲಿಲ್ಲದವರು ಅಥವಾ ಅಕ್ರಮ ಮತದಾರರು ಎಂದು ಚುನಾವಣಾ ಆಯೋಗ ವರ್ಗೀಕರಿಸಿದೆ. ಇದು ಒಟ್ಟು ಮತದಾರರ ಶೇ.13ರಷ್ಟಾಗಿದ್ದು, ಚುನಾವಣೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 70 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿರುವುದಾಗಿಯೂ ಆರೋಪಿಸಿದರು.
ತಮ್ಮ ವಿರುದ್ಧ 45 ಕಾನೂನು ಪ್ರಕರಣಗಳಿದ್ದರೂ ಪ್ರತಿಪಕ್ಷದ ಹೋರಾಟ ಮುಂದುವರಿದಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ಭಾರತ್ ಜೋಡೋ ಯಾತ್ರೆ ಸಾಮಾನ್ಯ ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಮಹತ್ವವನ್ನು ಕಲಿಸಿದೆ ಎಂದು ಹೇಳಿದರು.
ಭಾರತದ ಪ್ರಜಾಪ್ರಭುತ್ವ 150 ಕೋಟಿಗೂ ಅಧಿಕ ಜನರಿಗೆ ಮಾತ್ರವಲ್ಲ, ಇಡೀ ಜಗತ್ತಿಗೂ ಮಹತ್ವದ ಸಾರ್ವಜನಿಕ ಸಂಪತ್ತಾಗಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಸೋಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಹೋರಾಟ ಕೋಪ, ದ್ವೇಷ ಮತ್ತು ಹಿಂಸೆಯ ಬದಲಿಗೆ ಸತ್ಯ ಹಾಗೂ ಅಹಿಂಸೆಯ ಮಾರ್ಗದಲ್ಲಿ ನಡೆಯಲಿದೆ. ಸರ್ವಾಧಿಕಾರಿ ಪ್ರವೃತ್ತಿಗಳ ವಿರುದ್ಧ ಜಾಗತಿಕ ಶಕ್ತಿಗಳು ಒಂದಾಗಬೇಕು ಎಂದು ಕರೆ ನೀಡಿದರು.
