ಮಂಗಳೂರಿನಲ್ಲಿ ಪುನರ್ ಅಭಿವೃದ್ಧಿಗೊಂಡ CSI ಸುಶಾಂತಿ ನಿಲಯ ಸೆ.25ರಂದು ಉದ್ಘಾಟನೆ

0
Mangaluru-CSI-Sushanthi-Nilaya-Community-Hall-Press-meet

ಮಂಗಳೂರು: ನಗರದ ಮೆರ್ಕಾರಾ ಹಿಲ್‌ನಲ್ಲಿರುವ ಪುನರ್ ಅಭಿವೃದ್ಧಿಗೊಂಡ ಸಿಎಸ್‌ಐ ಸುಶಾಂತಿ ನಿಲಯ ಸಮುದಾಯ ಭವನ ಸೆ.25ರಂದು ಸಂಜೆ ಉದ್ಘಾಟನೆಗೊಳ್ಳಲಿದೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಎಸ್‌ಐ ಸುಶಾಂತಿ ದೇವಾಲಯದ ಸಭಾಪಾಲಕ ರೆ| ಸಂತೋಷ್ ಕುಮಾರ್ ಸಿಂಗ್ ಮಾಹಿತಿ ನೀಡಿದರು. ಐತಿಹಾಸಿಕ ಕಟ್ಟಡದ ಸಂರಕ್ಷಣೆ ಹಾಗೂ ಪುನರುಜ್ಜೀವನದ ನಿಟ್ಟಿನಲ್ಲಿ ನೂತನ ಸಮುದಾಯ ಭವನದ ಅಭಿವೃದ್ಧಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ಸಿಎಸ್‌ಐ ಕರ್ನಾಟಕ ದಕ್ಷಿಣ ಡಯಾಸಿಸ್‌ನ ಬಿಷಪ್ ರೆ| ಹೇಮಚಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿ ರೆ| ಡಾ| ಡೆಕ್ಸ್ಟರ್ ಮಾಬೆನ್ ಹಾಗೂ ಸಭಾಪಾಲಕ ರೆ| ಸಂತೋಷ್ ಕುಮಾರ್ ಸಿಂಗ್ ಉದ್ಘಾಟಿಸಲಿದ್ದಾರೆ. ಸಂತೋಷ್ ಕುಮಾರ್ ಜೋನಸ್, ಕಿರಣ್ ಕರಾಟ್ ಹಾಗೂ ದೇವಪುತ್ರ ಕೋಟ್ಯಾನ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪದಾಧಿಕಾರಿಗಳು, ಡಯಾಸಿಸ್ ಖಜಾಂಚಿ, ಚರ್ಚ್ ಹಾಗೂ ಸಮುದಾಯದ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದರು.

300 ಆಸನಗಳ ಹವಾನಿಯಂತ್ರಿತ ಭವನ

ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸಮುದಾಯ ಭವನವನ್ನು ಜೋನಸ್ ಪೆಟ್ರೊ ಪ್ರೊಡಕ್ಟ್ಸ್ ಪ್ರೈ.ಲಿ. ಸಂಸ್ಥೆಯ ನಿರ್ದೇಶಕ ಸುನಿಲ್ ಜೋನಸ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಜೋನಸ್ ಅವರ ಕೊಡುಗೆಯಾಗಿ ಸಂಪೂರ್ಣ ಪುನರ್ ಅಭಿವೃದ್ಧಿಪಡಿಸಲಾಗಿದೆ.

ತಮ್ಮ ಅಗಲಿದ ತಂದೆ-ತಾಯಿ ಎಸ್. ಎಲಿಯ ಜೋನಸ್ ಮತ್ತು ವಿ. ಸುಲೋಚನಾ ಜೋನಸ್ ಅವರ ಸ್ಮರಣಾರ್ಥ ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಲಾಯಿತು.

ಉದ್ಯಮಿ ಸುನಿಲ್ ಜೋನಸ್ ಮಾತನಾಡಿ, ಸುಮಾರು ಏಳು ತಿಂಗಳ ಕಾಲ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ನೂತನ ಕಟ್ಟಡದಲ್ಲಿ 300 ಆಸನಗಳ ಹವಾನಿಯಂತ್ರಿತ ಸಮುದಾಯ ಭವನ ನಿರ್ಮಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಧ್ಯಾ ಜೋನಸ್, ಬೆನೆಟ್ ಅಮನ್ನ ಹಾಗೂ ಸಂತೋಷ್ ಕುಮಾರ್ ಜೋನಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *