ಮತದಾರರಿಗೆ ತಲಾ 6000 ರೂ. ಆಮಿಷ: ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ದೂರು

0
cong-bjp-flag

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಿ ಮತದಾರರಿಗೆ 6 ಸಾವಿರ ರೂ. ನೀಡಿ ಮತ ಕೇಳಲಾಗುವುದು. ಎದುರಾಳಿ ಅಭ್ಯರ್ಥಿ ಎಷ್ಟೇ ದುಡ್ಡು ಖರ್ಚು ಮಾಡಿದರೂ ಅದಕ್ಕಿಂತ 10 ಕೋಟಿ ಹೆಚ್ಚಿನ ಹಣ ಖರ್ಚು ಮಾಡಲು ನಾವು ಸಿದ್ಧವಿದ್ದೇವೆ ಎಂಬ ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದೆ.

ರಮೇಶ್ ಜಾರಕಿಹೊಳಿ, ಪ್ರತಿ ಮತದಾರನಿಗೆ 6000 ರೂಪಾಯಿ ಲಂಚದ ಬಹಿರಂಗ ಆಮಿಷದ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ಲಂಚದ ಮೂಲಕ ಖರೀದಿ ಮಾಡಲು ಸಂಚು ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅವರಿಗೆ ಪ್ರೇರಣೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೇಲ್, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ಈ ನಿಯೋಗ ಬುಧವಾರ ದೂರು ನೀಡಿದೆ.

ದೂರು ದಾಖಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ನಡೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಮಾಜಿ ಮಂತ್ರಿಗಳು, ಬಿಜೆಪಿ ಶಾಸಕರು ನಾವು ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಆದರೂ ಸರ್ಕಾರ ರಚನೆ ಮಾಡುತ್ತೇವೆ ಎಂಬ ಸಂಕಲ್ಪ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಮೂರ್ನಾಲ್ಕು ಶಾಸಕರ ಹೇಳಿಕೆಗಳು, ರಾಜ್ಯದ ಮತದಾರರಿಗೆ ಆಮೀಷ ಒಡ್ಡುತ್ತಿರುವುದರ ಸ್ಪಷ್ಟ ಉದಾಹರಣೆ ಆಗಿವೆ. ಬಿಜೆಪಿ ಸರ್ಕಾರ 40% ಕಮಿಷನ್ ಮೂಲಕ ಸಾವಿರಾರು ಕೋಟಿ ಹಣ ಸಂಗ್ರಹಿಸಿದೆ. ಇತ್ತೀಚೆಗೆ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರು ಪ್ರತಿ ಮತಕ್ಕೆ 6 ಸಾವಿರ ನೀಡುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಎದುರಾಳಿ ಅಭ್ಯರ್ಥಿ ಎಷ್ಟೇ ಖರ್ಚು ಮಾಡಿದರೂ ಅದಕ್ಕಿಂತ 10ಕೋಟಿ ಹೆಚ್ಚಿನ ಮೊತ್ತವನ್ನು ಖರ್ಚು ಮಾಡುವುದಾಗಿ ಅವರು ಹೇಳಿರುವ ವಿಡಿಯೋ, ಮಾಧ್ಯಮ ವರದಿ ದಾಖಲೆಗಳಿವೆ. ಈ ದಾಖಲೆಗಳ ಸಮೇತ ನಾನು, ಸಿದ್ದರಾಮಯ್ಯ ಹಾಗೂ ಪಕ್ಷದ ಇತರ ನಾಯಕರೆಲ್ಲರೂ ಸೇರಿ ಹೈಗ್ರೌಂಡ್ಸ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಬಿಜೆಪಿಯವರು ರಾಜ್ಯದ 5 ಕೋಟಿ ಮತದಾರರಿಗೆ ಪ್ರತಿಯೊಬ್ಬರಿಗೆ 6 ಸಾವಿರ ರೂ.ನಂತೆ ಒಟ್ಟು 30 ಸಾವಿರ ಕೋಟಿ ಹಣ ಹಂಚಲು ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಮತದಾರರಿಗೆ ಆಮಿಷ ಒಡ್ಡುತ್ತಿರುವ ಬಿಜೆಪಿ ವಿರುದ್ಧ ದಾಖಲೆ ಸಮೇತ ಐಪಿಸಿ ಸೆಕ್ಷನ್ 171ಬಿ, 506, ಜನಪ್ರತಿನಿಧಿ ಕಾಯ್ದೆ 123 ಪ್ರಕಾರ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದರು.

ಅಧಿಕಾರಿಗಳು ಕೂಡಲೇ ಎಫ್ಐಆರ್ ದಾಖಲಿಸಬೇಕು. ಈ ದೇಶದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ನಾವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ನೀಡಿದ್ದೇವೆ. ಅವರ ಪಕ್ಷದ ನಾಯಕರು ಇಂತಹ ಹೇಳಿಕೆ ಕೊಟ್ಟರು ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾವು ಆ ಪಕ್ಷದ ಮುಖ್ಯಸ್ಥರ ಮೇಲೂ ದೂರು ನೀಡುತ್ತಿದ್ದೇವೆ. ಮಾಜಿ ಸಚಿವರ ಹೇಳಿಕೆ ತಿರಸ್ಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗುವುದಿಲ್ಲ. ಅಗತ್ಯ ಕ್ರಮ ಆಗಲೇಬೇಕು, ರಮೇಶ್ ಜಾರಕಿಹೊಳಿ ಅವರ ಬಂಧನವಾಗಬೇಕು ಎಂಬುದು ನಮ್ಮ ಆಗ್ರಹ ಎಂದು ಡಿಕೆಶಿ ಹೇಳಿದರು.

ನಾವು ರಾಜ್ಯ ಪ್ರವಾಸದಲ್ಲಿದ್ದ ಕಾರಣ ಕಳೆದ ಎರಡು ಮೂರು ದಿನಗಳಿಂದ ಬಂದು ದೂರು ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ ಇಂದು ರಾಷ್ಟ್ರೀಯ ಮತದಾರರ ದಿನ. ಈ ಮತದಾನದ ಹಕ್ಕಿಗೆ ಅದರದೇ ಆದ ಗೌರವ ಇದೆ. ಈ ಪವಿತ್ರವಾದ ಹಕ್ಕನ್ನು ಉಳಿಸಲು ಈ ದಿನ ಬಿಜೆಪಿಯ ಷಡ್ಯಂತ್ರದ ವಿರುದ್ಧ ದೂರು ನೀಡಿದ್ದೇವೆ. ನಾಳೆ ನಮ್ಮ ನಾಯಕರ ಸಭೆ ಇದ್ದು, ಪ್ರತಿ ಕ್ಷೇತ್ರದಲ್ಲಿ ನಿಗಾ ವಹಿಸಲು ಕಾರ್ಯಕರ್ತರಿಗೆ ತಿಳಿಸಲಾಗುವುದು ಎಂದರು.

Leave a Reply

Your email address will not be published. Required fields are marked *

You may have missed