ಯಲಹಂಕ ತಾಲ್ಲೂಕಿನ ವೆಂಕಟಾಲ ಜಮೀನು ವಿವಾದ: EDಗೆ ದೂರು

0
Yalahanka ED Case 5

ಬೆಂಗಳೂರು: ಯಲಹಂಕ ತಾಲ್ಲೂಕಿನ ವೆಂಕಟಾಲ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ (ST) ಕುಟುಂಬಗಳಿಗೆ ಸೇರಿದ ಜಮೀನುಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೋರಿ ನವದೆಹಲಿಯ ಜಾರಿ ನಿರ್ದೇಶನಾಲಯಕ್ಕೆ (ED) ದೂರು ಸಲ್ಲಿಕೆಯಾಗಿದೆ.

ನರಸಿಂಹ ಮೂರ್ತಿ ಎನ್., ಮುನಿರಾಜು ಬಿ. ಮತ್ತು ಸರಿತಾ ಎಂ. ಎಂಬವರು ಅಕ್ಟೋಬರ್ 7ರಂದು ಸಲ್ಲಿಸಿರುವ ದೂರಿನಲ್ಲಿ ಎಂಬಸಿ ಗ್ರೂಪ್‌ಗೆ ಸಂಬಂಧಿಸಿದ ಸಂಸ್ಥೆ, ಮ್ಯಾಕ್ ಚಾರ್ಲ್ಸ್ ಹಬ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ನಾರ್ಮನ್ ಡಿಸೋಜಾ, ಆರ್. ವೆಂಕಟೇಶ್ ಮತ್ತು ಎಚ್.ಬಿ. ಜಯರಾಜ್ ಸೇರಿದಂತೆ ಕೆಲವರ ಪಾತ್ರದ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ.

ವೆಂಕಟಾಲ ಗ್ರಾಮದ ಸರ್ವೆ ನಂ. 56ರ 7 ಎಕರೆ 22 ಗುಂಟೆ ಹಾಗೂ ಸರ್ವೆ ನಂ. 41ರ 2 ಎಕರೆ 4 ಗುಂಟೆ ಜಮೀನುಗಳು ವಿವಾದದ ಕೇಂದ್ರಬಿಂದುವಾಗಿವೆ. ಈ ಜಮೀನುಗಳು ಮೂಲತಃ ತಲ್ವಾರಿ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮಂಜೂರಾಗಿದ್ದವು. ಬಳಿಕ ನಡೆದ ಸರಣಿ ವಹಿವಾಟುಗಳಿಂದ ಕುಟುಂಬಗಳು ಜಮೀನಿನ ಮೇಲಿನ ಹಕ್ಕು ಕಳೆದುಕೊಂಡಿವೆ ಎಂದು ದೂರುದಾರರು ಆರೋಪಿಸಿದ್ದಾರೆ.

ಜಮೀನುಗಳ ಮರು-ಅನುದಾನ, ಕಂದಾಯ ದಾಖಲೆಗಳ ಬದಲಾವಣೆ, ಮ್ಯುಟೇಷನ್, ಭೂ ಪರಿವರ್ತನೆ, ಉಪವಿಭಜನೆ ಹಾಗೂ ಮಾರಾಟ ಪ್ರಕ್ರಿಯೆಗಳಲ್ಲಿ ಅಕ್ರಮ ನಡೆದಿದೆಯೇ ಎಂಬುದನ್ನು ಪರಿಶೀಲಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ವಿವಾದಿತ ಸಾಮಾನ್ಯ ಅಧಿಕಾರ ಪತ್ರ (GPA) ಮತ್ತು ಉಯಿಲಿನ (Will) ನೈಜತೆ ಹಾಗೂ ಅವುಗಳ ಆಧಾರದಲ್ಲಿ ನಡೆದ ಆಸ್ತಿ ವರ್ಗಾವಣೆಗಳ ಬಗ್ಗೆಯೂ ತನಿಖೆಗೆ ಒತ್ತಾಯಿಸಲಾಗಿದೆ.

ಸರ್ವೆ ನಂ. 41/1ಕ್ಕೆ ಸಂಬಂಧಿಸಿದ ಸುಮಾರು 2 ಎಕರೆ 2 ಗುಂಟೆ ಜಮೀನು ಮ್ಯಾಕ್ ಚಾರ್ಲ್ಸ್ ಹಬ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸ್ವಾಧೀನಕ್ಕೆ ಬಂದಿರುವುದರ ಬಗ್ಗೆಯೂ ದೂರುದಾರರು ಪ್ರಶ್ನೆ ಎತ್ತಿದ್ದಾರೆ. ಈ ವ್ಯವಹಾರದಲ್ಲಿ ಪಾವತಿಸಲಾದ ಮೊತ್ತ, ಹಣದ ಮೂಲ ಮತ್ತು ಸಂಬಂಧಿತ ಸಂಸ್ಥೆಗಳ ನಡುವಿನ ಆರ್ಥಿಕ ಸಂಪರ್ಕಗಳನ್ನು ಪರಿಶೀಲಿಸುವಂತೆ ಕೋರಿದ್ದಾರೆ.

ಜಮೀನು ವಹಿವಾಟುಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳು, ಹೂಡಿಕೆಗಳು ಹಾಗೂ ಹಣ ವರ್ಗಾವಣೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ, ಅಂತಿಮ ಫಲಾನುಭವಿಗಳನ್ನು ಗುರುತಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಹಣವನ್ನು ವಿವಿಧ ಖಾತೆಗಳು ಅಥವಾ ಸಂಸ್ಥೆಗಳ ಮೂಲಕ ವರ್ಗಾಯಿಸಿ ರಿಯಲ್ ಎಸ್ಟೇಟ್, ಷೇರುಪತ್ರಗಳು ಅಥವಾ ಇತರ ಆಸ್ತಿಗಳಲ್ಲಿ ಹೂಡಿಕೆ ಮಾಡಲಾಗಿದೆಯೇ ಎಂಬುದನ್ನೂ ತನಿಖೆ ಮಾಡಬೇಕೆಂದು ಮನವಿ ಮಾಡಲಾಗಿದೆ.

ವಹಿವಾಟುಗಳಲ್ಲಿ ಮಧ್ಯವರ್ತಿಗಳು, ದಸ್ತಾವೇಜು ಬರಹಗಾರರು, ದಲ್ಲಾಳಿಗಳು, ವಕೀಲರು ಹಾಗೂ ಏಜೆಂಟರ ಪಾತ್ರವಿದ್ದರೆ ಅದನ್ನೂ ಪರಿಶೀಲಿಸಬೇಕು. ಅಕ್ರಮ ಹಣ ವರ್ಗಾವಣೆಯ ಅಂಶಗಳು ದೃಢಪಟ್ಟಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರುದಾರರು ಕೋರಿದ್ದಾರೆ.

Leave a Reply

Your email address will not be published. Required fields are marked *

You may have missed