ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಬಿಜೆಪಿ ನಾಯಕರಿಂದ ಮೊಸಳೆ ಕಣ್ಣೀರು; ಬಿ.ಕೆ.ಹರಿಪ್ರಸಾದ್ ಟೀಕೆ

0
cong bk Hariprasad

ಬೆಂಗಳೂರು: ಮೀಸಲಾತಿಗೆ ಬಿಜೆಪಿ ಬಗೆದಿರುವ ದ್ರೋಹ ಹಾಗೂ ಹಿಂದುಳಿದವರಿಗೆ ಮಾಡಿರುವ ಅನ್ಯಾಯ ಇತಿಹಾಸದ ಮೀಸಲಾತಿ ಚರ್ಚೆಯ ಪ್ರತಿ ಪುಟಗಳಲ್ಲೂ, ಪ್ರತಿ ಪದಗಳಲ್ಲೂ ಅಚ್ಚಳಿಯದೇ ಉಳಿದಿರುವ ಸತ್ಯ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ತಮ್ಮ ಆತ್ಮಸಾಕ್ಷಿಗೂ ವಿರುದ್ಧ ಮಾತಾಡಿರುವುದು ಹಾಸ್ಯಾಸ್ಪದ ಎಂದವರು ಹೇಳಿದ್ದಾರೆ.

ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ಪಕ್ಷ ಅಚಲವಾದ ನಿಲುವು ಹೊಂದಿದೆ.‌ ಆದರೆ ಮೀಸಲಾತಿಯ ಪರಮ ವಿರೋಧಿ ನಿಲುವು ಹೊಂದಿರುವ ಬಿಜೆಪಿ ಪಕ್ಷ ಇತಿಹಾಸ ತಿರುಚಲು ಹೊರಟಿದೆ ಎಂದವರು ಕಮಲ ನಾಯಕರ ನಿಲುವಿನ ಬಗ್ಗೆ ಕಟು ಟೀಕೆ ಮಾಡಿದ್ದಾರೆ.

ಮಂಡಲ್ ಆಯೋಗದ ಶಿಫಾರಸ್ಸು ಜಾರಿಯಾಗಬಾರದೆಂದು ಪ್ರಭಲವಾಗಿ ವಿರೋಧ ಮಾಡಿದ್ದೇ ವಿ.ಪಿಸಿಂಗ್ ಸರ್ಕಾರದ ಭಾಗವೇ ಆಗಿದ್ದ ಬಿಜೆಪಿ ಪಕ್ಷ. ಮಂಡಲ್ ಆಯೋಗದ ವಿರುದ್ಧ ಕಮಂಡಲ ಹೋರಾಟ ಶುರು ಮಾಡಿದನ್ನ ಬಿಜೆಪಿ ಮರೆಯಿತೇ? ಮಂಡಲ್ ವರದಿ ತಿರಸ್ಕರಿಸಬೇಕಂದು ದೇಶವ್ಯಾಪಿ ಚಳಿವಳಿ ನಡೆಸಿ, ಮೈಗೆ ಬೆಂಕಿ ಹಚ್ಚಿಕೊಂಡವರು ಯಾರು ಎಂಬುದನ್ನ ಬಿಜೆಪಿ ಮರೆಮಾಚುತ್ತಿದ್ದೆಯೇ? 1984ರಲ್ಲಿ ಲೋಕಸಭೆಯಲ್ಲಿ ಎರಡೇ ಎರಡು ಸ‍್ಥಾನಗಳನ್ನು ಹೊಂದಿದ್ದ ಬಿಜೆಪಿಯ ಪ್ರಾರಂಭಿಕ ಹಂತದ ರಾಜಕೀಯ ಯಶಸ್ಸಿನ ದೊಡ್ಡ ಪಾಲು ‘ಮಂಡಲ’ ವಿರುದ್ಧದ ‘ಕಮಂಡಲ’ ಚಳವಳಿಯ ಫಲವನ್ನ ಅಲ್ಲಗಳೆಯಲು ಸಾಧ್ಯವೇ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಬಿಜೆಪಿಯ ಮೀಸಲಾತಿ ವಿರೋಧಿ ಇತಿಹಾಸವಂತೂ ಮರೆಯಲು ಸಾಧ್ಯವಿಲ್ಲ. ಮೀಸಲಾತಿಯ ವಿರೋಧಿ ಚಳುವಳಿಯಲ್ಲಿ ಬಿಜೆಪಿಯದ್ದೇ ಸಿಂಹಪಾಲಿದೆ. ಮೀಸಲಾತಿಯ ಅವಧಿ ಮೀರಿದೆ,ಮೀಸಲಾತಿಯನ್ನು ಪರಾಮರ್ಶಿಸುವ ಕಾಲ ಬಂದಿದೆ ಎಂದು ಕಳೆದ ಬಿಹಾರದ ಚುನಾವಣೆಯಲ್ಲಿ ಸಂಘಪರಿವಾರದ ಸರ ಸಂಚಾಲಕ ಮೋಹನ್ ಭಾಗವತ್ ನೀಡಿದ ಹೇಳಿಕೆಯನ್ನು ದೇಶದ ಜನ ಮರೆತಿಲ್ಲ. ಅದಕ್ಕೆ ಬಿಹಾರದ ಜನರು ನೀಡಿದ ತಕ್ಕ ಉತ್ತರಕ್ಕೆ ಬಿಜೆಪಿ ಭಾರಿ ಬೆಲೆತೆತ್ತಿದೆ. ಆದ್ದರಿಂದಲೇ ಮೀಸಲಾತಿಯನ್ನು ಬಹಿರಂಗವಾಗಿ ವಿರೋಧಿಸುವ ಮನಸ್ಥಿತಿ ಮಾತ್ರ ಬದಲಾಗಿದೆ ಹೊರತು, ಕಾರ್ಯತಂತ್ರವಲ್ಲ ಎಂದು ಹರಿಪ್ರಸಾದ್ ವ್ಯಾಖ್ಯಾನಿಸಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಸಿದ್ದವಾಗಿದ್ದ ಹಿಂದುಳಿದ ವರ್ಗದ ವರದಿಯನ್ನು ಬಿಜೆಪಿ ಮೊದಲಿಗೆ ವಿರೋಧಿಸುತ್ತಾ, ಅಂಕಿ ಸಂಖ್ಯೆಗಳು ಸರಿಯಲ್ಲ, ಅವೈಜ್ಞಾನಿಕವಾಗಿ ಎಂದು ದೂರುತ್ತಾ ಬಂದಿದೆ. ಎಲ್ಲಿಯೂ ಅವೈಜ್ಞಾನಿಕ ವಿಷಯಗಳ ಬಗ್ಗೆ ಚರ್ಚೆಯೂ ನಡೆಸಲಿಲ್ಲ. ಕೊನೆಗೆ ವರದಿ ಒಪ್ಪಿಕೊಂಡರೇ ಹೋರಾಟ ನಡಸುವುದಾಗಿ ಬೆದರಿಕೆ ಒಡ್ಡಿದೆ. ಇದೆಲ್ಲವೂ ಬಿಜೆಪಿಯ ಹಿಂದುಳಿದವರ ಮೀಸಲಾತಿಯ ವಿರೋಧಿ ಹೋರಾಟದ ಕಾರ್ಯತಂತ್ರದ ಭಾಗ ಎಂದವರು ವಿಶ್ಲೇಷಿಸಿದ್ದಾರೆ.
ಬಿಜೆಪಿ ಮೀಸಲಾತಿಯ ಪರ ಮಾತಾಡುವ ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಕೇಂದ್ರದ ಸಚಿವರು ಇತಿಹಾಸಕ್ಕೆ ಅಪಚಾರ ನಡೆಸಿ, ಜನರನ್ನು ಮೂರ್ಖರನ್ನಾಗಿಸಿದರೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದವರು ಹೇಳಿದ್ದಾರೆ.

Leave a Reply

Your email address will not be published. Required fields are marked *