ಬೆಂಗಳೂರಿನ ಮೊದಲ ‘ಸರ್ಕ್ಯುಲರ್ ಟೆಕ್ಸ್‌ಟೈಲ್ ಲ್ಯಾಬ್’ ಲೋಕಾರ್ಪಣೆ

0
Ramalinga-Reddy-Circular-Textile-Lab

ಬೆಂಗಳೂರು: ಕೋರಮಂಗಲದ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಿರುವ ‘ಘನತ್ಯಾಜ್ಯ ಕಲಿಕಾ ಕೇಂದ್ರ’ ಹಾಗೂ ಬೆಂಗಳೂರಿನ ಪ್ರಥಮ ‘ಸರ್ಕ್ಯುಲರ್ ಟೆಕ್ಸ್‌ಟೈಲ್ ಲ್ಯಾಬ್’ ಅನ್ನು ಲೋಕಾರ್ಪಣೆಗೊಳಿಸಲಾಗಿದೆ.

ವಸ್ತ್ರ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಲ್ಯಾಂಡ್‌ಫಿಲ್‌ ಮುಕ್ತ ನಗರ ನಿರ್ಮಾಣಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಗಾರ್ಮೆಂಟ್ಸ್‌ ಹಾಗೂ ಟೈಲರಿಂಗ್‌ ಘಟಕಗಳಿಂದ ಸಂಗ್ರಹಿಸುವ ಬಟ್ಟೆ ತ್ಯಾಜ್ಯವನ್ನು ವಿವಿಧ ಉಪಯುಕ್ತ ವಸ್ತುಗಳಾಗಿ ಪರಿವರ್ತಿಸಲಾಗುತ್ತದೆ.

ಬಟ್ಟೆ ತ್ಯಾಜ್ಯದಿಂದ ಬ್ಯಾಗ್, ವ್ಯಾಲೆಟ್

ಗಾರ್ಮೆಂಟ್ಸ್‌ ಹಾಗೂ ಟೈಲರಿಂಗ್‌ ಅಂಗಡಿಗಳಿಂದ ಸಂಗ್ರಹಿಸುವ ಬಟ್ಟೆ ಚಿಂದಿಗಳಿಂದ ಬ್ಯಾಗ್, ವ್ಯಾಲೆಟ್, ಬೆಡ್‌ಶೀಟ್ ಸೇರಿದಂತೆ ವಿವಿಧ ವಸ್ತುಗಳನ್ನು ತಯಾರಿಸಲಾಗುತ್ತದೆ. ಇದರಿಂದ ತ್ಯಾಜ್ಯ ಕಡಿತದ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಘನತ್ಯಾಜ್ಯ ನಿರ್ವಹಣೆ ಕುರಿತು ವಿದ್ಯಾರ್ಥಿಗಳು, ಅಪಾರ್ಟ್‌ಮೆಂಟ್‌ ನಿವಾಸಿಗಳು, ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಆರ್‌.ವಿ. ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಯೋಜನೆಗೆ ಕೈಜೋಡಿಸಿವೆ.

ಪ್ರತಿದಿನ 13 ಟನ್ ಹಸಿ ಕಸ ಸಂಸ್ಕರಣೆ

ಕೇಂದ್ರದಲ್ಲಿ ಪ್ರತಿದಿನ 13 ಟನ್ ಹಸಿ ಕಸ ಸಂಸ್ಕರಿಸುವ ಸಾಮರ್ಥ್ಯದ ಬಯೋ-ಮಿಥನೈಸೇಷನ್‌ ಘಟಕವನ್ನೂ ಸ್ಥಾಪಿಸಲಾಗಿದೆ. ಇದರಿಂದ ಉತ್ಪಾದನೆಯಾಗುವ ಬಯೋಗ್ಯಾಸ್‌ ಅನ್ನು ಸುತ್ತಮುತ್ತಲಿನ ಹೋಟೆಲ್‌ಗಳಿಗೆ ಇಂಧನವಾಗಿ ಪೂರೈಸಲಾಗುತ್ತದೆ.

ತ್ಯಾಜ್ಯ ಸಾಗಣೆಗೆ ಅನುಕೂಲವಾಗುವಂತೆ 25 ಟನ್ ಸಾಮರ್ಥ್ಯದ ಮಿನಿ ಟ್ರಾನ್ಸ್‌ಫರ್‌ ಸ್ಟೇಷನ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಥರ್ಮಾಕೋಲ್‌ ತ್ಯಾಜ್ಯವನ್ನು ಕರಗಿಸಿ ಗಟ್ಟಿ ಪದಾರ್ಥವನ್ನಾಗಿ ಪರಿವರ್ತಿಸಿ ದೆಹಲಿಗೆ ಕಳುಹಿಸಲಾಗುತ್ತದೆ. ಅಲ್ಲಿ ಫೋಟೋ ಫ್ರೇಮ್‌ ಸೇರಿದಂತೆ ವಿವಿಧ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ. ನಿರುಪಯುಕ್ತ ಹಾಸಿಗೆಗಳಿಂದ ನಾರು ಬೇರ್ಪಡಿಸಿ ಮರುಬಳಕೆ ಮಾಡುವ ವ್ಯವಸ್ಥೆಯೂ ಇದೆ.

ಇದೇ ವೇಳೆ, ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಳೆಯ ಸೋಫಾ, ಮಂಚ, ಮೇಜು ಸೇರಿದಂತೆ ಬೃಹತ್‌ ತ್ಯಾಜ್ಯವನ್ನು ಮನೆ ಬಾಗಿಲಿನಿಂದಲೇ ಸಂಗ್ರಹಿಸುವ ವ್ಯವಸ್ಥೆ ಆರಂಭಿಸಲಾಗಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ, ಚಾಮುಂಡೇಶ್ವರಿ, ಶಶಿಕಲಾ, ಮಾಜಿ ಪಾಲಿಕೆ ಸದಸ್ಯರಾದ ಚಂದ್ರಪ್ಪ, ಗೋವರ್ಧನ ರೆಡ್ಡಿ, ಪದ್ಮಶ್ರೀ ಬಲರಾಮ್‌ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *