ಅಡಿಕೆಯಿಂದ ಚಹಾ ತಯಾರಿಸಬಹುದು

ಆಹಾರ ವಿಚಾರದಲ್ಲಿ ಸಂಶೋಧನೆಗಳು ಮುಂದುವರಿಯುತ್ತಲೇ ಇವೆ. ಇದೀಗ ಅಡಿಕೆಯಿಂದಲೂ ಚಹಾ ತಯಾರಿಸಬಹುದು, ಅದರ ಕಿಕ್ಕನ್ನು ಎಲ್ಲರೂ ಅನುಭವಿಸಬಹುದು. ಇಂತಹದ್ದೊಂದು ಉತ್ಪನ್ನ ಬೆಂಗಳೂರು ಜನರಿಗೆ ಸಿದ್ಧವಾಗಿದೆ.
ಮಕ್ಕಳಿಂದ ದೊಡ್ಡವರವರೆಗೆ ಚಹಾ ಎಂದರೆ ಇಷ್ಟ. ಎಲ್ಲರೂ ಒಂದು ಕಪ್ ಚಹಾ ಸವಿಯೋಣ ಎನ್ನುವವರೇ ಹೆಚ್ಚು. ಇದೀಗ ಚಹಾ ಪ್ರಿಯರಿಗೆ ಇದು ನಿಜಕ್ಕೂ ಸಿಹಿ ಸುದ್ದಿ.
ಅಡಿಕೆಯಿಂದ ತಯಾರಿಸಿದ ಗುಟುಕಾ, ಪಾನ್ ಪರಾಗ್ ಸೇರಿದಂತೆ ನಾನಾ ಉತ್ಪನ್ನಗಳು ಜನರ ಗಮನ ಸೆಳೆದಿತ್ತು. ಕೆಲಸದ ಒತ್ತಡದಲ್ಲಿದ್ದಾಗ ಇಂತಹ ಉತ್ಪನ್ನಗಳು ಧನಿಯಾರಿಸಿವೆ ಎಂಬುದೂ ಅನೇಕರ ಅನುಭವದ ಮಾತು. ಇದೀಗ ಇದೇ ಅಡಿಕೆಯಿಂದ ಚಹಾ ಕೂಡ ಸಿದ್ಧವಾಗುತ್ತದೆ ಎಂಬ ಸಂಶೋಧನೆ ನಿಜಕ್ಕೂ ಕುತೂಹಲ.
ಮಲೆನಾಡ ಸೆರಗು ಶಿವಮೊಗ್ಗ ಜಿಲ್ಲೆ ಮಂಡಗದ್ದೆಯ ನಿವಾಸಿ ನಿವೇದನ್ ನೆಂಪೆ ಎಂಬವರು ಇಂತಹದ್ದೊಂದು ಪ್ರಯತ್ನ ಮಾಡಿದ್ದಾರೆ. ಅಡಿಕೆಯಿಂದ ಬಗೆಬಗೆಯ ಉತ್ಪನ್ನಗಳನ್ನು ತಯಾರಿಸಬಹುದಾದರೂ, ಚಹಾ ತಯಾರಿಸಬಾರದೇಕೆ ಎಂಬ ಪ್ರಶ್ನೆ ಹುಟ್ಟಿ ಕೊಂಡ ಹಿನ್ನೆಲೆಯಲ್ಲಿ ಅವರು ಸುದೀರ್ಘ ಸಂಶೋಧನೆ ಕೈಗೊಂಡರು.
ಸುಮಾರು ಒಂದುವರೆ ವರ್ಷದಿಂದ ನಿರಂತರ ಸಂಶೋಧನೆಯ ಪ್ರಯತ್ನ ಮಾಡಿದ ಅವರು, ಅಡಿಕೆ ಚಹಾದ ಸವಿ ನೀಡಲು ಸಜ್ಜಾಗಿದ್ದಾರೆ. ತಾವು ಅಡಿಕೆಯಿಂದ ಚಹಾ ತಯಾರಿಸಿದ್ದು, ಇದರಲ್ಲಿ ಶೇಕಡಾ 8ರಷ್ಟು ಬೆಟ್ಟೆ ಅಡಿಕೆಯ ಸತ್ವಗಳು ಇವೆ.
ಶೇಕಡಾ 20ರಷ್ಟು ಔಷಧಿಯ ಗುಣಗಳನ್ನು ಸೇರಿಸಲಾಗಿದೆ. ಅಷ್ಟೇ ಅಲ್ಲ, ಚಹಾಕ್ಕೆ ಪ್ಲೇವರನ್ ಕೂಡ ಹಾಕಿ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದಾಗಿ ನಿವೇದನ್ ನೆಂಪೆ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಈ ಅಡಿಕೆ ಚಹಾವನ್ನು ಶುಕ್ರವಾರ ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡುವುದಾಗಿ ಹೇಳಿರುವ ಅವರು, ಏಳೂವರೆ ರೂಪಾಯಿ ದರದಲ್ಲಿ ಈ ಟೀ ಮಾರಾಟ ಮಾಡಬಹುದಾಗಿದೆ ಎಂದಿದ್ದಾರೆ.
ಒಟ್ಟಾರೆ ಗ್ರಾಹಕರಿಗೆ ಈ ಟೀ ಪ್ರಿಯವೆನಿಸಿದರೆ ಅಡಿಕೆ ಮಾರುಕಟ್ಟೆಗೂ ರಂಗು ಬರಲಿದೆ ಎಂಬುದು ತಜ್ಞರ ಅಭಿಪ್ರಾಯ.