ಪ್ರತಿಭಟನೆ, ದೊಂಬಿ ಬಿಟ್ಟು ಜನರ ಕಲ್ಯಾಣಕ್ಕೆ ಗಮನ ಕೊಡಿ: ಅಮಿತ್ ಶಾ ಪ್ರತಿಪಕ್ಷಗಳಿಗೆ ಎಚ್ಚರಿಕೆ

ನವದೆಹಲಿ: ಬೀದಿಗಿಳಿದು ಪ್ರತಿಭಟನೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಜಕೀಯ ನಾಯಕರು ಪ್ರತಿಭಟನೆ ಮತ್ತು ದೊಂಬಿಯ ರಾಜಕೀಯ ಬಿಟ್ಟು ಜನರ ಕಲ್ಯಾಣದತ್ತ ಗಮನಹರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಚುನಾವಣಾ ಆಯೋಗ, ಇವಿಎಂ ಮತ್ತು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ) ನಡೆಸುತ್ತಿರುವ ‘ವೋಟ್ ಚೋರಿ’ ಅಭಿಯಾನವನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ.
ದೆಹಲಿಯ ಹೊರವಲಯದಲ್ಲಿ ₹8,941 ಕೋಟಿ ವೆಚ್ಚದ ದೆಹಲಿ ಜಲ ಮಂಡಳಿಯ 33 ಯೋಜನೆಗಳಿಗೆ ಚಾಲನೆ ನೀಡಿ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾ, ಚುನಾವಣೆಯಲ್ಲಿ ಗೆಲ್ಲಬೇಕಾದರೆ ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷಗಳಿಗೆ ಸಲಹೆ ನೀಡಿದರು.

ಸೋಲಿನ ನೆಪಕ್ಕೆ ‘ವೋಟ್ ಚೋರಿ’ ಆರೋಪ
ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗಲೆಲ್ಲ ಪ್ರತಿಪಕ್ಷಗಳು ಮತಗಳ್ಳತನದ ಆರೋಪ ಮಾಡುತ್ತವೆ. ಇದೇ ಚುನಾವಣಾ ಆಯೋಗ ಮತ್ತು ಇವಿಎಂ ವ್ಯವಸ್ಥೆ ಇರುವಾಗ ಕಾಂಗ್ರೆಸ್ ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಗೆದ್ದಿರಲಿಲ್ಲವೇ? ನೀವು ಗೆದ್ದಾಗ ಪ್ರಜಾಪ್ರಭುತ್ವ ಸರಿಯಾಗಿರುತ್ತದೆ, ಸೋತಾಗ ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳು ತಪ್ಪು ಮಾಡುತ್ತವೆಯೇ ಎಂದು ಶಾ ಪ್ರಶ್ನಿಸಿದರು.
‘ವೋಟ್ ಚೋರಿ’ ಅಭಿಯಾನದ ಮೂಲಕ ಕಾಂಗ್ರೆಸ್ ಮತ್ತು ಎಎಪಿ ಅಕ್ರಮ ಒಳನುಸುಳುಕೋರರ ನಕಲಿ ಮತಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ಅವರು, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಕಾರ್ಯವನ್ನು ಮೋದಿ ಸರ್ಕಾರ ಮುಂದುವರಿಸಲಿದೆ ಎಂದರು.
ಬಿಜೆಪಿ ಮುಂದಿನ ಮೂರು ದಶಕಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲಿದೆ ಎಂಬ ತಮ್ಮ ಹೇಳಿಕೆಗೆ ಪ್ರತಿಪಕ್ಷಗಳು ಆತಂಕಗೊಂಡಿವೆ ಎಂದು ಹೇಳಿದ ಶಾ, ರಾಹುಲ್ ಗಾಂಧಿಯವರ ವಿದೇಶ ಪ್ರವಾಸಗಳನ್ನು ಪರೋಕ್ಷವಾಗಿ ಉಲ್ಲೇಖಿಸಿ ವ್ಯಂಗ್ಯವಾಡಿದರು. ಜನರಿಗಾಗಿ ಕೆಲಸ ಮಾಡದಿದ್ದರೆ ಪ್ರತಿಪಕ್ಷಗಳು ಮುಂದಿನ 30 ವರ್ಷಗಳಲ್ಲೂ ಅಧಿಕಾರಕ್ಕೆ ಮರಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
2029ರ ವೇಳೆಗೆ ಯಮುನಾ ಸ್ವಚ್ಛ
ದೆಹಲಿಯ ಮಾಲಿನ್ಯ ಮತ್ತು ಯಮುನಾ ನದಿಯ ದುಸ್ಥಿತಿಗೆ ಹಿಂದಿನ ಕಾಂಗ್ರೆಸ್ ಹಾಗೂ ಎಎಪಿ ಆಡಳಿತಗಳೇ ಕಾರಣ ಎಂದು ಶಾ ಆರೋಪಿಸಿದರು. ಕೇಂದ್ರ ಸರ್ಕಾರದ ಜೊತೆಗೆ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಮೂರು ವರ್ಷಗಳಲ್ಲಿ ಪ್ರತಿಯೊಂದು ಮನೆಗೂ ಒಳಚರಂಡಿ ಮತ್ತು ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಜಾರಿಯಲ್ಲಿದೆ. 2029ರ ಮೇ ವೇಳೆಗೆ ಯಮುನಾ ನದಿಯನ್ನು ಸಂಪೂರ್ಣ ಸ್ವಚ್ಛಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ದೆಹಲಿಯ ಕಸದ ಬೆಟ್ಟಗಳಿಂದ ಎರಡು ಕೋಟಿ ಟನ್ಗೂ ಅಧಿಕ ತ್ಯಾಜ್ಯವನ್ನು ತೆರವುಗೊಳಿಸಿ, ಸುಮಾರು 100 ಎಕರೆ ಪ್ರದೇಶವನ್ನು ಮುಕ್ತಗೊಳಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಸ್ಥಳಗಳನ್ನು ಸಾರ್ವಜನಿಕ ಉದ್ಯಾನವನಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಪಂಜಾಬ್ನಲ್ಲಿ ಎನ್ಡಿಎ ಅಧಿಕಾರಕ್ಕೆ
ಪಂಜಾಬ್ನಲ್ಲಿ ಮಾದಕ ವಸ್ತುಗಳ ಪಿಡುಗನ್ನು ನಿಯಂತ್ರಿಸುವಲ್ಲಿ ಎಎಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಶಾ, 2029ರ ವೇಳೆಗೆ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟಹಾಕಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
