2029ರೊಳಗೆ ಭಾರತವನ್ನು ಮಾದಕ ವಸ್ತು ಮುಕ್ತ ದೇಶವನ್ನಾಗಿಸುವ ಗುರಿ: ಅಮಿತ್ ಶಾ

ನವದೆಹಲಿ: 2029ರ ಡಿಸೆಂಬರ್ 31ರೊಳಗೆ ಭಾರತವನ್ನು ಸಂಪೂರ್ಣ ಮಾದಕ ವಸ್ತು ಮುಕ್ತ ದೇಶವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ನಡೆದ ಪೊಲೀಸ್ ಸ್ಮರಣಾರ್ಥ ದಿನದ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದ ಅವರು, ದೇಶದಲ್ಲಿ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಲ್ಲ ರಾಜ್ಯಗಳ ಪೊಲೀಸ್ ಪಡೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಮಾದಕ ವಸ್ತುಗಳು ದೇಶದ ಆರ್ಥಿಕತೆ ಮತ್ತು ಪ್ರಗತಿಗೆ ದೊಡ್ಡ ಸವಾಲಾಗಿವೆ. ಈ ಪಿಡುಗನ್ನು ತೊಡೆದುಹಾಕಲು ಕೇಂದ್ರ ಗೃಹ ಸಚಿವಾಲಯ ಕಾರ್ಯತಂತ್ರ ರೂಪಿಸಿದ್ದು, ನಿಗದಿತ ಗಡುವಿನೊಳಗೆ ಭಾರತವನ್ನು ಮಾದಕ ವಸ್ತು ಮುಕ್ತ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ, ಕಳೆದ ಮೂರು ದಶಕಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ಜಮ್ಮು-ಕಾಶ್ಮೀರದ ಭಯೋತ್ಪಾದನೆ, ಈಶಾನ್ಯ ರಾಜ್ಯಗಳಲ್ಲಿನ ಅಶಾಂತಿ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಈ ಪ್ರದೇಶಗಳಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ಹೇಳಿದರು.
ಶಾಂತಿ ಒಪ್ಪಂದಗಳು, ಭದ್ರತಾ ಪಡೆಗಳ ನಿರಂತರ ಕಾರ್ಯಾಚರಣೆ ಮತ್ತು ಯೋಧರ ಕಠಿಣ ಪರಿಶ್ರಮದಿಂದ ನಕ್ಸಲಿಸಂ ನಿರ್ಮೂಲನೆಯತ್ತ ದೇಶ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಯ ತ್ಯಾಗ, ಸಮರ್ಪಣೆ ಹಾಗೂ ಧೈರ್ಯದಿಂದ ದೇಶದ ಆಂತರಿಕ ಭದ್ರತೆ ಮತ್ತಷ್ಟು ಬಲಗೊಂಡಿದೆ. ಭದ್ರತಾ ಪಡೆಗಳ ಸೇವೆಯಿಂದಾಗಿ ಭಾರತ ಜಾಗತಿಕ ಮಟ್ಟದಲ್ಲಿ ದೃಢವಾಗಿ ಮುನ್ನಡೆಯಲು ಸಾಧ್ಯವಾಗಿದೆ ಎಂದು ಅಮಿತ್ ಶಾ ಕೃತಜ್ಞತೆ ಸಲ್ಲಿಸಿದರು.
