ರಾಜಕೀಯಕ್ಕೆ ‘ಕ್ರೇಜಿಸ್ಟಾರ್’ ಎಂಟ್ರಿ?; ರವಿಚಂದ್ರನ್ಗೆ ಪರಿಷತ್ ಸ್ಥಾನ ಬಹುತೇಕ ಖಚಿತ

ಬೆಂಗಳೂರು: ಕನ್ನಡದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಕ್ರೇಜಿಸ್ಟಾರ್’ ವಿ. ರವಿಚಂದ್ರನ್ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಸಾಂಸ್ಕೃತಿಕ ಕ್ಷೇತ್ರದಿಂದ ರವಿಚಂದ್ರನ್ ಅವರ ಹೆಸರನ್ನು ಪರಿಗಣಿಸಲು ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ರವಿಚಂದ್ರನ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಾಲ್ಯದ ಸ್ನೇಹಿತ ಹಾಗೂ ಕ್ಲಾಸ್ಮೇಟ್ ಆಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಬಾಲ್ಯದ ಸ್ನೇಹಿತ ಶಿವಕುಮಾರ್ ಅವರನ್ನು ರವಿಚಂದ್ರನ್ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಅವರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಕನ್ನಡ ಚಿತ್ರರಂಗದಲ್ಲಿ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ರವಿಚಂದ್ರನ್ ಸೇವೆ ಸಲ್ಲಿಸಿದ್ದಾರೆ. ಅವರ ಕಲಾ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ಸಾಂಸ್ಕೃತಿಕ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
